ಸೋಮವಾರಪೇಟೆ, ಫೆ. ೯: ಪುರಾಣೇತಿಹಾಸ ಹೊಂದಿರುವ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕಲ್ಲಳ್ಳಿಯಲ್ಲಿರುವ ಶ್ರೀಕಲ್ಲಳ್ಳಿ ಮಠದಲ್ಲಿ ಶ್ರೀರುದ್ರಮುನಿ ಸ್ವಾಮೀಜಿಗಳ ಶ್ರೀಗುರುಪಟ್ಟಾಧಿಕಾರ ಮಹೋತ್ಸವಕ್ಕೆ ಗೋಧೂಳಿ ಲಗ್ನದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕಲ್ಲರಳಿ ಹೂವಾದ ಜಾಗವೇ ಕಲ್ಲಳ್ಳಿ ಎಂಬ ನಂಬಿಕೆ ಹೊಂದಿರುವ ಕಲ್ಲಳ್ಳಿ ಮಠಕ್ಕೆ ೧೯೯೫ರಲ್ಲಿಯೇ ಶ್ರೀರುದ್ರಮುನಿ ಸ್ವಾಮೀಜಿಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದರೂ ಈವರೆಗೆ ಪಟ್ಟಾಧಿಕಾರ ಮಾಡಿರಲಿಲ್ಲ. ಈ ಬಗ್ಗೆ ಕೊಡ್ಲಿಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನೆಲೆಸಿರುವ ವೀರಶೈವ ಸಮುದಾಯ ಬಾಂಧವರು ಸ್ವಾಮೀಜಿಗಳಿಗೆ ಪಟ್ಟಾಧಿಕಾರ ನೇರವೇರಿಸಲು ಮುಂದಾಗಿದ್ದು, ಅದರಂತೆ ಗುರುವಾರ ಸಂಜೆ ಗೋಧೂಳಿ ಲಗ್ನದಲ್ಲಿ ಪೂಜಾಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು.
ಕೊಡ್ಲಿಪೇಟೆ ವೀರಶೈವ ಮಂಡಳಿ, ಕೊಡ್ಲಿಪೇಟೆ ವೀರಶೈವ ಸಮಾಜ, ಮಠದ ಭಕ್ತವೃಂದದ ನೇತೃತ್ವದಲ್ಲಿ ಕಲ್ಲಳ್ಳಿ ಮಠದಲ್ಲಿ ಗಂಗಾಪೂಜೆ ನೆರವೇರಿಸುವ ಮೂಲಕ ಮಹೋತ್ಸವ ವನ್ನು ಆರಂಭಿಸಲಾಯಿತು.
ಗAಗಾಪೂಜೆಯ ನಂತರ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ನಾಂದಿ ಪೂಜೆ, ಅಂಕುರಾರ್ಪಣ, ಮಂಟಪ ಪೂಜೆ, ವಾಸ್ತು ಅಘೋರ ಕಳಸ ಪೂಜೆ, ಸಪ್ತಸಭಾ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ, ಉಮಾ ಮಹೇಶ್ವರ, ಮಹಾಮೃತ್ಯುಂಜಯ ಪೂಜೆಗಳು ಸೇರಿದಂತೆ ಹೋಮ ಹವನಾದಿಗಳು ನಡೆದವು.
ಇದರೊಂದಿಗೆ ಕಿಕ್ಕೇರಿ ಅಶೋಕಪ್ಪ ಹಾಗೂ ಗುರುಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಠದಲ್ಲಿ ನಡೆದ ಪೂಜಾ ಕಾರ್ಯಗಳ ನೇತೃತ್ವವನ್ನು ಕೊಡ್ಲಿಪೇಟೆ ವ್ಯಾಪ್ತಿಯ ಪುರೋಹಿತ ವರ್ಗದವರು ವಹಿಸಿದ್ದರು.
ತಾ. ೧೦ ರಂದು (ಇಂದು) ನಸುಕಿನ ಜಾವ ೪ ರಿಂದ ೫ ಗಂಟೆಯವರೆಗೆ
(ಮೊದಲ ಪುಟದಿಂದ) ಸಲ್ಲುವ ಬ್ರಾಹ್ಮೀ ಮುಹೂರ್ತದಲ್ಲಿ ಪಟ್ಟಾಧಿಕಾರದ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಶ್ರೀರುದ್ರಮುನಿ ಸ್ವಾಮೀಜಿಗಳಿಗೆ ಮಸ್ತಕಾಭಿಷೇಕ, ಮಂಗಳಸ್ನಾನ, ಅನುಗ್ರಹ, ಗುರುದೀಕ್ಷೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು ನೆರವೇರಲಿವೆ.
ಪಟ್ಟಾಧಿಕಾರ ಮಹೋತ್ಸವದಲ್ಲಿ ಪ್ರಮುಖವಾಗಿ ಕಾಡುಸಿದ್ದೇಶ್ವರ ಮಠದ ಮಠಾಧಿಪತಿಗಳಾದ ಡಾ. ಶ್ರೀ ಶಿವಾನುಭವ ಚರವರ್ಯ ಕರಿವೃಷಭ ದೇಶೀಕೇಂದ್ರ ಶಿವಯೋಗಿ ಸ್ವಾಮೀಜಿಗಳು ಭಾಗಿಯಾಗಲಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ಮಠಾಧಿಪತಿಗಳೊಂದಿಗೆ ಹೊರ ಜಿಲ್ಲೆಯ ಸ್ವಾಮೀಜಿಗಳೂ ಸಾನ್ನಿಧ್ಯ ವಹಿಸಲಿದ್ದಾರೆ.
ತಾ. ೧೦ ರಂದು ಬೆಳಿಗ್ಗೆ ೯ ಗಂಟೆಗೆ ಕೊಡ್ಲಿಪೇಟೆಯಿಂದ ಯಸಳೂರು, ಕೆಂಚಮ್ಮನಹೊಸಕೋಟೆ ಭಾಗದ ವೀರಶೈವ ಸಮಾಜದವರ ನಂದಿ ಧ್ವಜ, ವೀರಗಾಸೆ, ವಾದ್ಯವೈಭವಗಳೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀರುದ್ರಮುನಿ ಸ್ವಾಮೀಜಿಗಳ ಮೆರವಣಿಗೆೆಯು ಕಲ್ಲಳ್ಳಿ ಮಠದವರೆಗೆ ನಡೆಯಲಿದೆ. ೧೧ ಗಂಟೆಗೆ ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ವರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಧರ್ಮಸಭಾ ಕಾರ್ಯಕ್ರಮ ನಡೆಯಲಿದ್ದು, ಬಹುತೇಕ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.