ವೀರಾಜಪೇಟೆ, ಫೆ. ೯: ಮನೆಯಲ್ಲಿದ್ದ ಒಂಟಿ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಯು ಬಳಿಕ ಮನೆಯ ಸನಿಹದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೀರಾಜಪೇಟೆ ತಾಲೂಕು ದೇವಣಗೇರಿ ಗ್ರಾಮದ ನಿವಾಸಿ ಮೂಕೊಂಡ ಬಾಬು ಮಾದಪ್ಪ (೬೮) ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಹಿಳೆಯ ಮನೆಗೆ ಕತ್ತಿಯೊಂದಿಗೆ ತೆರಳಿದ ಬಾಬು ಮಾದಪ್ಪ ಮಾನಭಂಗಕ್ಕೆ ಯತ್ನಿಸಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಮಹಿಳೆಯ ಅರಚಾಟ ಕೇಳಿ ಮೂಕೊಂಡ ಉತ್ತಪ್ಪ ಎಂಬವರು ಸ್ಥಳಕ್ಕೆ ತೆರಳಿದ್ದು, ಈ ವೇಳೆ ಬಾಬು ಮಾದಪ್ಪ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಉತ್ತಪ್ಪ ಅವರು ಮಹಿಳೆಯನ್ನು ವೀರಾಜಪೇಟೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಮಾನಭಂಗಕ್ಕೆ ಯತ್ನ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡ ಬಾಬು ಮಾದಪ್ಪನಿಗಾಗಿ ಅವರ ಮನೆಯವರು ಮತ್ತು ಗ್ರಾಮಸ್ಥರು ಶೋಧ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಇಂದು ಬೆಳಿಗ್ಗೆ ಸುಮಾರು ೧೧ ಗಂಟೆ ಸಮಯದಲ್ಲಿ ಮನೆಯ ಸನಿಹದ ಕರೆಯೊಂದರಲ್ಲಿ ಬಾಬು ಮಾದಪ್ಪನ ಶವ ಪತ್ತೆಯಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯಡಿ ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ತಪ್ಪಿನ ಅರಿವಾಗಿ ನೊಂದು ಬಾಬು ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
-ಕಿಶೋರ್ ಕುಮಾರ್ ಶೆಟ್ಟಿ: