ಮಡಿಕೇರಿ, ಫೆ. ೭: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ತಾ. ೧೨ ರಂದು ೨೦೨೧-೨೨ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಸರ್ಕಾರಿ ಜಮೀನುಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಉದ್ಘಾಟಿಸಲಿದ್ದು, ಕೊಡಗು ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕುಂದಲ್ಪಾಡಿ ಜೆ. ದಿವಾಕರ, ಅತಿಥಿಗಳಾಗಿ ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಸಹಾಯಕ ನಿಯಂತ್ರಕ ಸೂದನ ಎ. ಜಾಜಯ್ಯ, ಚೆಟ್ಟಿಮಾನಿ ಕುಂದಚೇರಿ ಗ್ರಾಮದ ಕೆದಂಬಾಡಿ ಪುಷ್ಪಾವೇಣಿ ಶಿವಾಜಿ, ಮಡಿಕೇರಿ ಆರೋಗ್ಯ ಇಲಾಖೆಯ ನಿವೃತ್ತ ಫಾರ್ಮಸಿಸ್ಟ್ ಕಲ್ಲಂಬಿ ಯು. ವೆಂಕಪ್ಪ ಹಾಗೂ ತಾಳತ್ತಮನೆಯ ಪಾಣತ್ತಲೆ ಭೀಮಯ್ಯ ಪಾಲ್ಗೊಂಡು ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ.
೧೯೦೮ ರಲ್ಲಿ ಸ್ಥಾಪನೆ: ಶತಮಾನೋತ್ಸವ ಕಂಡ ಸಂಸ್ಥೆಯು ೧೯೦೮ ರಲ್ಲಿ ಜನ್ಮ ತಳೆದಲ್ಲಿಂದಲೂ ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಪತ್ರಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರೊಂದಿಗೆ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಈ ವರ್ಷವು ಪ್ರತಿಭಾ ಪುರಸ್ಕಾರದೊಂದಿಗೆ ಎಳೆಯ ಮನಸ್ಸುಗಳಿಗೆ ಯೋಗ್ಯ ವೇದಿಕೆಯೊದಗಿಸುವ ಉದ್ದೇಶದಿಂದ ನಡೆಸಲಾದ ಛದ್ಮವೇಷ, ಚಿತ್ರಕಲೆ ಸ್ಪರ್ಧೆ, ಸಾಮಾನ್ಯ ಜ್ಞಾನ ಸ್ಪರ್ಧೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಕ್ರೀಡೆ, ವಿಜ್ಞಾನ, ಪುರಸ್ಕೃತ ಶಿಕ್ಷಕರು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.