ಮಡಿಕೇರಿ. ಫೆ. ೬: ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಪ್ರತಿಯೊಂದು ಇಲಾಖೆ, ವಿಭಾಗಗಳಿಗೊಂದೊAದು ಕಚೇರಿಗಳಿವೆ., ಕಚೇರಿಗಳಿಗೆ ಅಧಿಕಾರಿ-ಸಿಬ್ಬಂದಿಗಳನ್ನೂ ನೇಮಕ ಮಾಡಲಾಗುತ್ತದೆ.., ಅವರುಗಳಿಗೆ ಸರಕಾರ ದಿಂದ ಸಂಬಳ ಕೂಡ ನೀಡಲಾಗುತ್ತದೆ.., ಆದರೆ, ಕೆಲವು ಕಚೇರಿಗಳು ನಾಮಕಾವಸ್ಥೆಗೆ ಮಾತ್ರ ಇದ್ದು, ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿಗಳೂ ಇರುವದಿಲ್ಲ. ಆದರೂ ಕಚೇರಿಗಳು ಮಾತ್ರ ಕರ್ತವ್ಯದ ದಿನಗಳಂದು ತೆರೆದೇ ಇರುತ್ತವೆ..!
ಇದಕ್ಕೊಂದು ಉದಾಹರಣೆ ಜಿಲ್ಲಾಡಳಿತ ಸಂಕೀರ್ಣದಲ್ಲಿರುವ, ಜಿಲ್ಲಾಧಿಕಾರಿ ಕಚೇರಿ ಇರುವ ಆವರಣದಲ್ಲೇ ಇರುವ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖಾ ಕಚೇರಿ..! ಈ ಕಚೇರಿ ವಾರದ ಎಲ್ಲ ದಿನಗಳಲ್ಲೂ ಬಾಗಿಲು ತೆರದಿರುತ್ತದೆ. ಆದರೆ ಒಳಗಡೆ ಮಾತ್ರ ಯಾರೂ ಇರುವದಿಲ್ಲ., ಏನಾದರೂ ಕೆಲಸ-ಕಾರ್ಯಗಳಿಗೆಂದು ಹೋದವರಿಗೆ ಖಾಲಿ ಕುರ್ಚಿಗಳು ಸ್ವಾಗತ ಕೋರುತ್ತವೆ..!
ಈ ಕಚೇರಿಯ ಅಧಿಕಾರಿ ಇರುವದು ಮೈಸೂರಿನಲ್ಲಿ., ಅಲ್ಲಿಂದ ಬೆಳಿಗ್ಗೆ ಬರುವ ಅಧಿಕಾರಿ ಮಧ್ಯಾಹ್ನದ ನಂತರ ಕಾಣಸಿಗುವದಿಲ್ಲ. ಅಷ್ಟರಲ್ಲಾಗಲೇ ಅವರು ಮೈಸೂರಿನ ಬಸ್ ಏರಿಯಾಗಿರುತ್ತದೆ..! ಮತ್ತೋರ್ವ ಸಿಬ್ಬಂದಿ ಮಂಗಳೂರಿನವರು..! ಇವರು ವಾರದಲ್ಲಿ ಎರಡು ದಿನಗಳು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇನ್ನುಳಿದ ದಿನಗಳಲ್ಲಿ ಇವರ ಕುರ್ಚಿ ಖಾಲಿಯಾಗಿರುತ್ತದೆ..! ಅದು ಬಿಟ್ಟರೆ ಕಚೇರಿ ನಿರ್ವಹಣೆಗೆಂದು ಓರ್ವ ನೌಕರರಿದ್ದಾರೆ. ಬೆಳಿಗ್ಗೆ ಬಂದು ಬಾಗಿಲು ತೆರೆಯುವದು, ಸಂಜೆ ಸಮಯಕ್ಕೆ ಸರಿಯಾಗಿ ಬಾಗಿಲು ಮುಚ್ಚುವದು ಇವರ ನಿತ್ಯದ ಕಾಯಕವಾಗಿದೆ. ಹಗಲು ವೇಳೆಯಲ್ಲಿ ಅಧಿಕಾರಿ-ಸಿಬ್ಬಂದಿಗಳೇ ಇಲ್ಲದ ಮೇಲೆ ತನಗೇನು ಕೆಲಸವೆಂದು ಇವರೂ ಕೂಡ ಅತ್ತಿತ್ತ ನಡೆಯುತ್ತಾ ಕಾಲಕಳೆಯುತ್ತಿರುತ್ತಾರೆ..!
ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆಂದು ಬರುವವರು ಏನಾದರೊಂದು ಮಾಹಿತಿ, ಇನ್ನಿತರ ವಿಚಾರಗಳಿಗಾಗಿ ಈ ಕಚೇರಿಗೂ ಭೇಟಿ ನೀಡುತ್ತಾರೆ. ಆದರೆ., ಮಾಹಿತಿ ನೀಡಬೇಕಾದವರು ಮಾತ್ರ ಅಲ್ಲಿರುವದಿಲ್ಲ..! -ಟಿ.ಜಿ. ಸತೀಶ್