ಮಡಿಕೇರಿ, ಫೆ. ೬: ೧ನೇ ಮೊಣ್ಣಂಗೇರಿ - ಗಾಳಿಬೀಡು ಗ್ರಾಮದ ಗ್ರಾಮದೇವರಾದ ಶ್ರೀ ಮೇಕೇರಿ ಅಯ್ಯಪ್ಪ ದೇವಸ್ಥಾನ ಪುರಾತನ ಇತಿಹಾಸವನ್ನು ಹೊಂದಿದ್ದು, ಪ್ರಸ್ತುತ ಶಿಥಿಲಾವಸ್ಥೆಯಲ್ಲಿದೆ. ಇದೀಗ ಈ ಪುರಾತನ ದೇಗುಲದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ತಾ. ೮ ಹಾಗೂ ೯ ರಂದು ಇದಕ್ಕೆ ಚಾಲನೆ ನೀಡಲಾಗುತ್ತಿದೆ.

೧ನೇ ಮೊಣ್ಣಂಗೇರಿ ಹಾಗೂ ಗಾಳಿಬೀಡು ಗ್ರಾಮದ ಗ್ರಾಮದೇವರು ಇದಾಗಿದ್ದು, ದೇವಾಲಯ ಸುಮಾರು ೩೨೫ ರಿಂದ ೩೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ ಎನ್ನುವ ಐತಿಹ್ಯವಿದೆ. ಶ್ರೀ ದೊಡ್ಡ ವೀರ ರಾಜನ ಎರಡನೇ ತಮ್ಮ ನಂದರಾಜನ ವಂಶಸ್ಥರಾದ ದೇವಪ್ಪ ರಾಜ ೧೭೭೦-೧೭೭೪ರಲ್ಲಿ ಈ ದೇವಾಲಯ ನಿರ್ಮಾಣ ಮಾಡಿರುವುದಾಗಿ ಹೇಳಲಾಗುತ್ತಿದೆ.

ಈ ದೇವಾಲಯವು ಗದ್ದೆ ಬಯಲಿನ ಎತ್ತರದ ಸ್ಥಳದಲ್ಲಿದ್ದು, ಸಮ - ತಟ್ಟು ಮಾಡಿದ ಜಾಗದಲ್ಲಿ ನಿರ್ಮಾಣವಾಗಿದೆ. ಇಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಊರಿನವರಿಂದ ಹಬ್ಬ ಆಚರಿಸಲ್ಪಡುತ್ತಿದ್ದು, ವಾರ್ಷಿಕ ಪೂಜೆಯು ಇರುತ್ತದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತಾದರೂ ೨೦೧೫ ರಿಂದ ವನ್ಯಮೃಗಗಳ ಉಪಟಳದಿಂದಾಗಿ ನಿತ್ಯಪೂಜೆ ಪ್ರಸ್ತುತ ನಿಂತು ಹೋಗಿದೆ.

ಇದೀಗ ತಿಂಗಳ ಪೂಜೆ ಜರುಗುತ್ತಿದೆ. ಇತ್ತೀಚೆಗೆ ಗ್ರಾಮಸ್ಥರು ತಂತ್ರಿಗಳ ಮೂಲಕ ತಾಂಬೂಲ ಪ್ರಶ್ನೆ ಇಟ್ಟು ವಿಚಾರಿಸಿದಾಗ ದೇವಾಲಯದ ಜೀರ್ಣೋದ್ಧಾರದೊಂದಿಗೆ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶ ಪೂಜೆಗೆ ಸಲಹೆ ಬಂದಿದೆ. ಇದರಂತೆ ಗ್ರಾಮಸ್ಥರು ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದು, ಸುಮಾರು ೧೫ ರಿಂದ ೨೦ ಲಕ್ಷ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ತಾ. ೮ ಹಾಗೂ ೯ ರಂದು ಬ್ರಹ್ಮಶ್ರೀ ಪೆರಾಜೆ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತಿದೆ. ತಾ. ೮ ರ ಸಂಜೆಯಿAದ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ತಾ. ೯ ರಂದು ಬೆಳಿಗ್ಗೆ ೫ ಕ್ಕೆ ಗಣಹೋಮ ಅನುಜ್ಞಾ ಕಲಶಪೂಜೆ, ಕಲಶಾಭಿಷೇಕ, ಬಾಲಾಲಯ ಪ್ರತಿಷ್ಠೆ ಮಹಾಪೂಜೆ, ಪ್ರಸಾದ ವಿತರಣೆ ಇರುವುದಾಗಿ ತಕ್ಕಮುಖ್ಯಸ್ಥರ ಪರವಾಗಿ ಎ.ಎನ್. ಚಂಗಪ್ಪ ಅವರು ತಿಳಿಸಿದ್ದಾರೆ.

ಜೀರ್ಣೋದ್ಧಾರಕ್ಕೆ ಸಾರ್ವಜನಿಕರ ಸಹಾಯವನ್ನು ಬಯಸಲಾಗಿದೆ. ನೆರವು ನೀಡುವವರು ಕರ್ನಾಟಕ ಗ್ರಾಮೀಣ ಬ್ಯಾಂಕ್, ಮಡಿಕೇರಿ Sಃ

ಂ/ಅ ಓಔ: ೧೨೨ ೮೧೧೦೦೦೦ ೩೧೨೪, IಈSಅ : Pಏಉಃ ೦೦೧೨೨೮೧ ಗೆ ಹಣ ಸಹಾಯ ಮಾಡಬಹುದಾಗಿ ತಕ್ಕ ಮುಖ್ಯಸ್ಥರು ಹಾಗೂ ದೇವಾಲಯ ಅಭಿವೃದ್ಧಿ ಸಮಿತಿಯವರು ಕೋರಿದ್ದಾರೆ.