ಸೋಮವಾರಪೇಟೆ, ಫೆ. ೧: ಸಮೀಪದ ಯಡೂರು ಸರ್ಕಾರಿ ಬಿಟಿಸಿಜಿ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕೋರ್ಸ್ಗಳನ್ನು ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಪೋಷಕರ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಂ.ಸಿ.ಎ., ಹೊಟೇಲ್ ಮ್ಯಾನೇಜ್‌ಮೆಂಟ್, ಟೂರಿಸಂ ಕೋರ್ಸ್ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಆಸಕ್ತಿ ಮತ್ತು ಮುತುವರ್ಜಿ ವಹಿಸಬೇಕು ಎಂದರು.

ಕಾಲೇಜಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸಬೇಕು. ಕಾಲೇಜಿನಲ್ಲಿ ಉತ್ತಮ ವಾತಾವರಣವಿದ್ದು, ಖಾಸಗಿ ಕಾಲೇಜಿಗಿಂತಲೂ ಹೆಚ್ಚಿನ ಸೌಕರ್ಯಗಳಿವೆ. ಈ ಬಗ್ಗೆ ಸಮರ್ಪಕವಾದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಯಾವುದೇ ವಿದ್ಯಾಸಂಸ್ಥೆ ಉಳಿಯಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಸಂಸ್ಥೆಗೆ ದಾಖಲು ಮಾಡಬೇಕು. ಸ್ಥಳೀಯವಾಗಿ ಇರುವ ಕಾಲೇಜಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಆಗಾಗ್ಗೆ ವಿಚಾರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿ ಮನುಕುಮಾರ್ ರೈ ಮಾತನಾಡಿ, ಕಾಲೇಜಿನ ಅಭಿವೃದ್ದಿಯ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಕಾಲೇಜಿಗೆ ನ್ಯಾಕ್ ಸಮಿತಿ ಆಗಮಿಸಲಿದ್ದು, ಕಾಲೇಜಿನ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕು ಎಂದರು.

ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಎಸ್. ಮಹೇಶ್ ಮಾತನಾಡಿದರು. ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎನ್.ರಾಜು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರುಗಳಾದ ಗೋಪಾಲ್, ಧರ್ಮಪ್ಪ, ತಂಗಮ್ಮ, ಶರತ್, ಪ್ರಕಾಶ್, ಭಾನುಪ್ರಕಾಶ್, ಉಪನ್ಯಾಸಕರಾದ ಧನಲಕ್ಷ್ಮಿ, ದೇವರಾಜು, ಫೌಜಿಯಾ, ವಿಂದ್ಯಾ, ವೇಣುಗೋಪಾಲ್, ಸಂಗೀತಾ, ಆಶಿಕಾ, ಸಿದ್ದೇಶ್ ಇದ್ದರು.