ಸೋಮವಾರಪೇಟೆ, ಫೆ. ೧: ಸಮೀಪದ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಆಶ್ರಯದಲ್ಲಿ ತಾ. ೧೬ ಮತ್ತು ೧೭ ರಂದು ನಡೆಯುವ ಜಾತ್ರೋತ್ಸವದ ಅಂಗವಾಗಿ ಎರಡನೇ ವರ್ಷದ ಮುಕ್ತ ಫುಟ್ಬಾಲ್ ಹಾಗು ಥ್ರೋಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ತಾ.೧೬ ಮತ್ತು ೧೭ ರಂದು ಪಂದ್ಯಾಟಗಳು ನಡೆಯಲಿವೆ. ಮೊದಲು ನೋಂದಾಯಿಸಿದ ೧೬ ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ತಾ. ೧೫ ಸಂಜೆ ೪ ಗಂಟೆಯೊಳಗೆ ತಂಡಗಳು ಹೆಸರು ನೊಂದಾಯಿಸಿ ಕೊಳ್ಳಬೇಕು ಎಂದು ಎಂದರು.
ಫುಟ್ಬಾಲ್ ಪಂದ್ಯಾಟದ ವಿಜೇತ ತಂಡಕ್ಕೆ ೫೦ ಸಾವಿರ ರೂ.ಗಳ ನಗದು, ಆಕರ್ಷಕ ಟ್ರೋಫಿ, ಎರಡನೇ ಬಹುಮಾನ ೨೫ ಸಾವಿರ ರೂ. ನಗದು ನೀಡಲಾಗುವುದು. ಥ್ರೋಬಾಲ್ ಪಂದ್ಯಾಟದ ವಿಜೇತರಿಗೆ ೧೦ಸಾವಿರ ಪ್ರಥಮ, ಎರಡನೆ ಬಹುಮಾನ ೫ ಸಾವಿರ ರೂ. ನೀಡಲಾಗುವುದು ಎಂದು ಮಾಹಿತಿಯಿತ್ತರು.
ತಾ. ೧೬ ರಂದು ಪಶುಚಿಕಿತ್ಸಾ ಶಿಬಿರ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ತಾ. ೧೭ರಂದು ಬೆಳಿಗ್ಗೆ ೮ ಗಂಟೆಗೆ ಗುಡ್ಡಗಾಡು ಓಟದ ಸ್ಪರ್ಧೆ ಇರುತ್ತದೆ. ತಾ. ೧೮ ರಂದು ರಾತ್ರಿ ದೇವಾಲಯ ಆವರಣದಲ್ಲಿ ಯಕ್ಷಗಾನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ ೯೪೮೦೮೫೩೫೩೭, ೯೯೭೨೬೩೨೧೦೯ ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಜಿ.ಎ.ಮಹೇಶ್, ವಿ.ಸಿ.ಸುಮಂತ್, ಗುರುಪ್ರಸಾದ್ ಇದ್ದರು.