ಮಡಿಕೇರಿ, ಜ. ೩೦; ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಗದ್ಗುರು, ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ೭೮ನೇ ಜಯಂತ್ಯುತ್ಸವ ಹಾಗೂ ೧೦ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ ನೆರವೇರಿತು. ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೫ ಮಂದಿ ಮಹಿಳೆಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಗು ಜಿಲ್ಲೆಯ ಹಿರಿಯ ಕ್ರೀಡಾಪಟು ಎಡಿಕೇರಿ ವಿಶಾಲಾಕ್ಷಿ ಅವರನ್ನು ಚುಂಚಶ್ರೀ ಭೈರವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಡಗು ಜಿಲ್ಲೆಯಿಂದ ಕೊಡಗು ಗೌಡ ಮಹಿಳಾ ಒಕ್ಕೂಟದ ೨೫ ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ‘ಪಟ್ಟೆ ಸೀರೆ ಉಟ್ಟ್ ನಿತ್ತೋಳ’ ಎಂಬ ಮಾತೆ ಕಾವೇರಿ ವೈಭವವನ್ನು ಸಾರುವ ಅರೆಭಾಷೆ ಸಮೂಹ ಗೀತೆಯನ್ನು ಪಾಂಡಿ ಕೀರ್ತಿ ಗಿರೀಶ್ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಲಾಯಿತು. ಮಹಿಳಾ ಒಕ್ಕೂಟದ ‘ಬೆಳ್ಳಿ ಬೆಳಕ್’ ಸ್ಮರಣ ಸಂಚಿಕೆ ಯನ್ನು ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿಗೆ ನೀಡಲಾಯಿತು.