ಸೋಮವಾರಪೇಟೆ, ಜ. ೨೮: ರಥ ಸಪ್ತಮಿ ಅಂಗವಾಗಿ ಶ್ರೀರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ದಡದಲ್ಲಿ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ರಥಸಪ್ತಮಿ ಅಂಗವಾಗಿ ಹೊನ್ನಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ, ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಯೋಗ, ವ್ಯಾಯಾಮಗಳು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢವಾಗಿಸುತ್ತದೆ. ದೈನಂದಿನ ಜೀವನಕ್ರಮದಲ್ಲಿ ಲವಲವಿಕೆಯನ್ನು ಉಂಟು ಮಾಡುವಲ್ಲಿ ಯೋಗ ಸಹಕಾರಿಯಾಗಿದೆ ಎಂದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಯೋಗ ಪಟುಗಳು ಸಾಮೂಹಿಕವಾಗಿ ೧೦೮ ಸೂರ್ಯನಮಸ್ಕಾರ ಮಾಡುವ ಮೂಲಕ ರಥ ಸಪ್ತಮಿಯಲ್ಲಿ ಭಾಗಿಯಾಗಿದ್ದರು.

ನಿರಂತರ ಯೋಗ ಸಂಸ್ಥೆಯಿAದ: ನಿರಂತರ ಯೋಗಕೇಂದ್ರ, ಯೋಗ ಕರಮಸ್ಯ ಕೌಶಲ ಕೇಂದ್ರ ಮತ್ತು ಪತಂಜಲಿ ಯೋಗ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಥ ಸಪ್ತಮಿ ಅಂಗವಾಗಿ ೧೦೮ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಶಿಕ್ಷಕ ಚಂದ್ರಹಾಸ್ ಭಟ್, ಜಗತ್ತಿಗೆ ಬೆಳಕನ್ನು ಕೊಡುತ್ತಿರುವ ಸೂರ್ಯನ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

ಕಾರ್ಯಕ್ರಮವನ್ನು ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಕೆ.ಲಕ್ಷಿö್ಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ .ಮುರಳೀಧರ್, ಸದಸ್ಯ ಎಸ್.ಆರ್. ವಸಂತ್, ಪತ್ರಕರ್ತ ಕೋವರ್‌ಕೊಲ್ಲಿ ಇಂದ್ರೇಶ್, ಯೋಗ ಶಿಕ್ಷಕರಾದ ಗಣೇಶ್ ಕಿಬ್ಬೆಟ್ಟ, ಪ್ರಶಾಂತ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್‌ಕುಮಾರ್ ಇದ್ದರು. ಕಾರ್ಯಕ್ರಮದಲ್ಲಿ ಗರ್ವಾಲೆಯ ಬೊಳಕಾಟ್ ತಂಡದಿAದ ಕೊಡವ ಜಾನಪದ ಕಲಾ ಪ್ರದರ್ಶನ ನಡೆಯಿತು.