ಸೋಮವಾರಪೇಟೆ, ಜ. ೨೮: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಕೊಡಗಿನಲ್ಲಿ ಕ್ರೀಡಾ ತರಬೇತಿ ಶಾಲೆ ತೆರೆಯುವ ಚಿಂತನೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರ ಸಂಖ್ಯೆ ಹೆಚ್ಚಾದಲ್ಲಿ ಐಎಎಸ್ ಹಾಗೂ ಐಪಿಎಸ್ ಪರೀಕ್ಷಾ ಪೂರ್ವ ತರಬೇತಿ ಕೇಂದ್ರಗಳನ್ನೂ ತೆರೆಯಲು ಕ್ರಮಕೈಗೊಳ್ಳುವುದಾಗಿ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹೆಚ್.ಎನ್. ರವೀಂದ್ರ ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ೯೫ಕ್ಕೂ ಅಧಿಕ ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಇಲ್ಲಿನ ಒಕ್ಕಲಿಗರ ಸಂಘದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ರಾಜ್ಯ ಒಕ್ಕಲಿಗರ ಸಂಘದಿAದ ಕೊಡಮಾಡುವ ಎಸ್ಎಸ್ಎಲ್ಸಿಯ ೧೦ ಹಾಗೂ ಪಿಯುಸಿಯ ೧೩ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ನಗದು ಪುರಸ್ಕಾರ ನೀಡಿ ಮಾತನಾಡಿದ ಅವರು, ವಿದ್ಯೆಯೊಂದೇ ಭವಿಷ್ಯವನ್ನು ರೂಪಿಸುವ ಮಾರ್ಗವಾಗಿದೆ. ವಿದ್ಯಾರ್ಜನೆಯ ಸಮಯದಲ್ಲಿ ವಿದ್ಯಾರ್ಥಿಗಳು ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸತತ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಕೊಡಗಿನಲ್ಲಿ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದÀನೀಯ. ಈ ವಿಭಾಗಕ್ಕೆ ಹೆಚ್ಚಿನ ಆಸಕ್ತಿ ದೊರೆತರೆ ತರಬೇತಿ ಕೇಂದ್ರ ಸ್ಥಾಪಿಸಬಹುದಾಗಿದೆ. ಇದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಕೊಡಗು ಮುಂಚೂಣಿಯಲ್ಲಿದ್ದು, ಪ್ರತಿಭೆಗಳಿಗೆ ಇನ್ನಷ್ಟು ಸಹಕಾರ ನೀಡುವ ನಿಟ್ಟಿನಲ್ಲಿ ಕ್ರೀಡಾ ತರಬೇತಿ ಶಾಲೆ ತೆರೆಯಲು ಪ್ರಯತ್ನಿಸಲಾಗುವುದು ಎಂದು ರವೀಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚು ಗಮನ ಹರಿಸಬೇಕು ಎಂದರು. ಜಿ.ಪಂ. ಮಾಜಿ ಸದಸ್ಯೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಬೆಲೆ ಕಟ್ಟಲಾಗದ ಸಂಪತ್ತು ವಿದ್ಯೆ. ವಿದ್ಯಾರ್ಜನೆಯಲ್ಲಿ ತಪಸ್ಸಿನಂತೆ ತೊಡಗಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಕಾರ್ಯದರ್ಶಿ ಯೋಗೇಂದ್ರ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಉದ್ಯಮಿ ಅರುಣ್ ಕಾಳಪ್ಪ, ಯುವ ವೇದಿಕೆಯ ದಯಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.