ಮಂಗಳೂರು ಪೊಲೀಸ್ ಕಮಿಷನರ್‌ಗೆ ಲೋಕಾಯುಕ್ತ ನೋಟೀಸ್

ಮಂಗಳೂರು, ಜ. ೨೮: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಕುರಿತು ವರದಿ ನೀಡುವಂತೆ ಎನ್. ಶಶಿಕುಮಾರ್ ಅವರನ್ನು ಲೋಕಾಯುಕ್ತರು ಕೇಳಿದ್ದಾರೆ. ೨೦೨೨ರ ಡಿಸೆಂಬರ್‌ನಲ್ಲಿ ಲೋಕಾಯುಕ್ತಕ್ಕೆ ಉಳ್ಳಾಲ ನಿವಾಸಿ ಮೊಹಮ್ಮದ್ ಕಬೀರ್ ದೂರು ನೀಡಿದ್ದರು. ಕಬೀರ್ ತಮ್ಮ ದೂರಿನಲ್ಲಿ ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಜಿ.ಎಸ್. ಮತ್ತು ಪಿಎಸ್‌ಐ ಪ್ರದೀಪ್ ಅವರು ಗಾಂಜಾ ಮತ್ತು ಮರಳು ಮಾಫಿಯಾ ಮತ್ತು ಹೊಟೇಲ್ ಮಾಲೀಕರಿಂದ ಲಂಚ ವಸೂಲಿ ಮಾಡುವ ಮೂಲಕ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಶಶಿಕುಮಾರ್ ಅವರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ದೂರಿದ್ದರು.

ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ: ಸೂರಜ್

ಹಾಸನ, ಜ. ೨೮: ಕಳೆದ ೧೫ ವರ್ಷಗಳಿಂದ ಸತತವಾಗಿ ಆರರಿಂದ ಏಳು ಶಾಸಕರನ್ನು ರೇವಣ್ಣ ಅವರು ಆಯ್ಕೆ ಮಾಡಿ ಕಳುಹಿಸಿದ್ದಾರೆ, ಹಾಸನವನ್ನು ರೇವಣ್ಣ ಅವರು ತಿಳಿದಿರುವಷ್ಟು ಬೇರೆ ಯಾರಿಗೂ ಗೊತ್ತಿಲ್ಲ ಎಂದು ಎಂಎಲ್‌ಸಿ ಸೂರಜ್ ರೇವಣ್ಣ ಹೇಳಿದ್ದಾರೆ. ಅರಕಲಗೂಡು ತಾಲೂಕು ಹರದೂರು ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ನಮ್ಮತಾಯಿಗೆ ಟಿಕೆಟ್ ಕೊಡಬೇಕು, ಇವತ್ತಿನ ಲೆಕ್ಕಾಚಾರ ನೋಡಿದರೆ ಭವಾನಿ ರೇವಣ್ಣ ಅಭ್ಯರ್ಥಿ ಆದರೆ ಗೆಲುವು ಖಚಿತ. ಇದನ್ನು ಬರೆದಿಟ್ಟುಕೊಳ್ಳಿ ಬೇಕಾದರೆ. ಇದನ್ನು ಬಿಟ್ಟು ಬೇರೆ ಜನಸಾಮಾನ್ಯರನ್ನು, ಕಾರ್ಯಕರ್ತರನ್ನು ನಿಲ್ಲಿಸುತ್ತೇವೆ ಎನ್ನುವ ಹೇಳಿಕೆಗಳನ್ನು ಬಿಟ್ಟುಬಿಡಬೇಕು. ರೇವಣ್ಣ ಸಾಹೇಬರಂತೆ ಹಾಸನ ಜಿಲ್ಲೆಯನ್ನು ಅರಿತಿರುವ ಮತ್ತೊಬ್ಬ ವ್ಯಕ್ತಿ ಈ ಭೂಮಿಯಲ್ಲಿ ಇಲ್ಲವೇ ಇಲ್ಲ. ಅವರು ಇಡೀ ಜಿಲ್ಲೆಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹದಿನೈದು ವರ್ಷದಿಂದ ಸತತವಾಗಿ ಆರರಿಂದ ಏಳು ಜನ ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಇದು ರೇವಣ್ಣ ಅವರ ಸ್ವಂತ ಪ್ರಯತ್ನ. ಅವರನ್ನು ಬಿಟ್ಟರೆ ಇನ್ಯಾರಿಗೂ ಈ ಜಿಲ್ಲೆಯಲ್ಲಿ ಟಿಕೆಟ್ ಬಗ್ಗೆ ಮಾತನಾಡಲು ಅವಕಾಶವಿಲ್ಲ ಎಂದು ಪರೋಕ್ಷವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಅಗ್ನಿ ಅವಘಡ - ವೈದ್ಯ ದಂಪತಿ ಸೇರಿ ಐವರು ಸಾವು

ಧನ್‌ಬಾದ್, ಜ. ೨೮: ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಆರ್ತಿ ಸ್ಮಾರಕ ನರ್ಸಿಂಗ್ ಹೋಂನ ಸ್ಟೋರ್ ರೂಮ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯ ದಂಪತಿ ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಆಸ್ಪತ್ರೆಯ ವೈದ್ಯ ದಂಪತಿಗಳಾದ ಡಾ. ವಿಕಾಶ್ ಹಜ್ರಾ (೭೫) ಮತ್ತು ಡಾ. ಪ್ರೇಮಾ ಹಜ್ರಾ ಸೇರಿದಂತೆ ಕನಿಷ್ಟ ಐದು ಮಂದಿ ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಇತರರಲ್ಲಿ ಡಾ. ಹಜ್ರಾ ಅವರ ಸೋದರಳಿಯ ಮತ್ತು ಇಬ್ಬರು ಆಸ್ಪತ್ರೆ ಸಿಬ್ಬಂದಿ ಸೇರಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ನಿನ್ನೆ ತಡರಾತ್ರಿ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿರುವ ವೈದ್ಯರ ನಿವಾಸದ ಪಕ್ಕದಲ್ಲಿರುವ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ರಮೇಣ ಪಕ್ಕದ ಕೋಣೆಗಳಿಗೂ ವ್ಯಾಪಿಸಿ ವೈದ್ಯರ ವಸತಿ ಸಮುಚ್ಚಯದಲ್ಲೂ ಹೊಗೆ ಆವರಿಸಿದೆ. ಅದೃಷ್ಟವಶಾತ್ ಆಸ್ಪತ್ರೆಗೆ ದಾಖಲಾದ ಯಾವುದೇ ರೋಗಿಗಳಿಗೆ ತೊಂದರೆಯಾಗಿಲ್ಲ. ಎರಡನೇ ಮಹಡಿಯಲ್ಲಿನ ಸ್ಟೋರ್ ರೂಂನಲ್ಲಿ ಬೆಳಗಿನ ಜಾವ ೨ ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧ ವಿಮಾನ ಪತನ, ವಿಂಗ್ ಕಮಾಂಡರ್ ಹುತಾತ್ಮ

ಬೆಂಗಳೂರು/ಭೋಪಾಲ್, ಜ. ೨೮: ತರಬೇತಿ ಕಾರ್ಯಾಚರಣೆಯಲ್ಲಿದ್ದ ಭಾರತೀಯ ವಾಯುಪಡೆ(ಐಎಎಫ್)ಯ ಎರಡು ಯುದ್ಧ ವಿಮಾನಗಳು ಶನಿವಾರ ಬೆಳಿಗ್ಗೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡಿದ್ದು, ದುರಂತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತ ರಾವ್ ಸಾರಥಿ ಅವರು ಹುತಾತ್ಮರಾಗಿದ್ದಾರೆ. ಅಪಘಾತದಲ್ಲಿ ಹನುಮಂತ ರಾವ್ ಸಾರಥಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಇಬ್ಬರು ಪೈಲಟ್‌ಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಗ್ವಾಲಿಯರ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.