ಮಡಿಕೇರಿ, ಜ. ೨೪: ಕೆಲವೊಂದು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಬಾರ ಬೆಳೆ ಉತ್ಪಾದನ ಕ್ಷೇತ್ರವನ್ನು ವ್ಯವಸ್ಥಿತ ಗೊಳಿಸುವ ಕೆಲಸವಾಗಬೇಕಾಗಿದೆ. ಸೂಕ್ತ ಬೆಲೆ ದೊರೆತು ಬೆಳೆಗಳಿಗೆ ಮೌಲ್ಯವರ್ಧನೆಗೊಳ್ಳಲು ಮಾರುಕಟ್ಟೆ ಗಟ್ಟಿಗೊಳಬೇಕು. ಇದರಿಂದ ಬೆಳೆಗಾರರು ಹಾಗೂ ಖರೀದಿಗಾರರಿಗೆ ಸಹಕಾರಿಯಾಗಲಿದೆ ಎಂದು ತಜ್ಞರು, ಸಂಬಾರ ಬೆಳೆಗಾರರು ಹಾಗೂ ಖರೀದಿದಾರರು ಅಭಿಮತ ವ್ಯಕ್ತಪಡಿಸಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಸಂಬಾರ ಮಂಡಳಿಯ ಸಕಲೇಶಪುರ ಪ್ರಾದೇಶಿಕ ಕಚೇರಿಯ ವತಿಯಿಂದ ಬೆಳೆಗಾರರ ಹಾಗೂ ಮಾರಾಟಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ, ಮಾರುಕಟ್ಟೆಯಲ್ಲಿನ ಲೋಪದೋಷ, ಉತ್ತಮ ಇಳುವರಿ ಹಾಗೂ ಲಾಭಾಂಶ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆಯ ಜೊತೆಗೆ ತಜ್ಞರು ಸಲಹೆ ನೀಡಿದರು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶಗಳಿದ್ದು, ರೈತರಿಗೆ ಒಳ್ಳೆಯ ಮಾರುಕಟ್ಟೆ ಸಿಗಬೇಕು ಆಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮ ಲಾಭ ದೊರೆತಂತಾಗುತ್ತದೆ. ಜಿಲ್ಲೆಯಲ್ಲಿ ಸಂಬಾರ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಾಳು ಮೆಣಸು, ಏಲಕ್ಕಿ, ಶುಂಠಿ ಬೆಳೆಗಳ ಜೊತೆಗೆ ಕಾಫಿ, ಕಿತ್ತಳೆ ಹೀಗೆ ಹಲವು ಬೆಳೆ ಬೆಳೆಯಲಾಗುತ್ತದೆ. ಸಾಂಬಾರ ಮಂಡಳಿ, ರೈತರಿಗೆ ಹಾಗೂ ಮಾರಾಟಗಾರರಿಗೆ ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಂಬಾರ ಮಂಡಳಿಯ ನಿರ್ದೇಶಕ ಕೆ.ಎಸ್. ಸತ್ಯನಾರಾಯಣ ಮಾತನಾಡಿ, ದೇಶದಲ್ಲಿ ಸಂಬಾರ ಬೆಳೆ ಉತ್ಪಾದನೆಯಲ್ಲಿ ವಾರ್ಷಿಕವಾಗಿ ಶೇ. ೬ ರಷ್ಟು ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲಿ ಬೆಳೆಗಳು ಬಲವರ್ಧನೆಗೊಂಡಿವೆ. ಸಾವಯವ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡಿದರೆ ಉತ್ಕೃಷ್ಟ ಗುಣಮಟ್ಟದ ಇಳುವರಿ ಪಡೆಯಬಹುದು ಎಂದರು.
ಸಂಬಾರ ಮಂಡಳಿಯ ಉಪನಿರ್ದೇಶಕ ಜಾನ್ಸಿ ಮಣಿತೋಟಂ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಆಯೋಜನೆಯಿಂದ ಬೆಳೆಗಾರರು ಹಾಗೂ ಮಾರಾಟಗಾರರ ನಡುವೆ ಸಂಬAಧ ವೃದ್ಧಿಸಿ ನೇರ ಮಾರುಕಟ್ಟೆಗೆ ದಾರಿಯಾಗುತ್ತದೆ. ಇಂದು ಸಂಬಾರ ಕ್ಷೇತ್ರ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ. ಶೇ. ೮೬ ರಷ್ಟು ಉತ್ಪಾದನೆ ಭಾರತ ದೇಶದಿಂದ ಆಗುತ್ತಿದೆ. ಆದರೆ, ಮಾರುಕಟ್ಟೆ ವ್ಯವಸ್ಥಿತವಾಗಿಲ್ಲ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಸಮರ್ಪಕವಾಗಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖಗೊಳ್ಳಬೇಕಾಗಿದೆ. ದೇಶದ ವಿವಿಧೆಡೆ ‘ಸ್ಪೆöÊಸಸ್ ಪಾರ್ಕ್’ ಹಾಗೂ ಪ್ರಯೋಗಾಲಯಗಳಿವೆ. ಏಲಕ್ಕಿ, ಶುಂಠಿ, ಕೆಂಪು ಮೆಣಸು, ಕರಿಮೆಣಸು, ವೆನಿಲ ಸೇರಿದಂತೆ ಅನೇಕ ಸಂಬಾರ ಪದಾರ್ಥಗಳು ಪಶ್ಚಿಮ ಘಟ್ಟದಲ್ಲಿ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಒಂದು ಕಾಲದಲ್ಲಿ ಕೊಡಗಿನಲ್ಲಿ ಬೆಳೆಯುತ್ತಿದ್ದ ಏಲಕ್ಕಿಗೆ ಜಾಗತಿಕ ಮನ್ನಣೆ ಇತ್ತು. ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದ ಏಲಕ್ಕಿ ಬದಲಾದ ಕಾಲಘಟ್ಟದಲ್ಲಿ ಕಟ್ಟೆರೋಗ ಬಾಧಿಸಿದ ಪರಿಣಾಮ ಬೆಳೆ ವಿನಾಶವಾಗುತ್ತಿದೆ. ಕೆಲವೆಡೆ ಮಾತ್ರ ಏಲಕ್ಕಿಯನ್ನು ಬೆಳೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಾರ ಮಂಡಳಿ ಏಲಕ್ಕಿ ಪುನಶ್ಚೇತನಕ್ಕೆ ಮುಂದಾಗಬೇಕು. ಸಂಶೋಧನೆಗಳ ಮೂಲಕ ಏಲಕ್ಕಿಯನ್ನು ಬಾಧಿಸುತ್ತಿರುವ ರೋಗ ತಡೆಗೆ ಕಾರ್ಯೋನ್ಮುಖಗೊಳ್ಳಬೇಕು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಕರಿಮೆಣಸಿಗೂ ರೋಗ ತಗುಲುತ್ತಿದೆ. ಇದರ ತಡೆಗೆ ಅಧ್ಯಯನದ ಅಗತ್ಯತೆ ಇದೆ. ಸರಿಯಾದ ಕ್ರಮವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರಿಮೆಣಸು ವಿನಾಶ ಸಾಧಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ರಚನಾತ್ಮಕ ಕೆಲಸಗಳು ಸಂಬಾರ ಮಂಡಳಿಯಿAದಾಗಬೇಕು ಎಂದು ಸಲಹೆ ನೀಡಿದರು.
ಸಂಬಾರ ಅಭಿವೃದ್ಧಿ ಮಂಡಳಿಯ ಹುಬ್ಬಳ್ಳಿ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ್ ಮಾತನಾಡಿ, ಸಂಬಾರ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ. ೫೦ಕ್ಕೂ ಹೆಚ್ಚು ಬೆಳೆಗಳನ್ನು ಬೇಡಿಕೆಗೆ ಅನುಗುಣವಾಗಿ ಬೆಳೆಯಲಾಗುತ್ತಿದೆ. ಆದರೆ, ಕೆಲವೊಂದು ಸಮಸ್ಯೆ ಬೆಳೆಗಾರರು ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಏರುಪೇರಿನಿಂದ ಸೂಕ್ತ ಬೆಲೆ ರೈತರಿಗೆ ದೊರಕುತ್ತಿಲ್ಲ. ಮೌಲ್ಯವರ್ಧನೆ ಗೊಳ್ಳಬೇಕಾದರೆ ಮೊದಲು ಮಾರುಕಟ್ಟೆ ಗಟ್ಟಿಗೊಳ್ಳಬೇಕು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮಂಡಳಿ ಕೆಲಸ ಮಾಡುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬೆಳೆಗಾರ ಕೇಶವ, ರಫ್ತುದಾರರಾದ ಜೋಮಿ ಮ್ಯಾಥ್ಯು, ಡಾ. ಸ್ವರೂಪ ರೆಡ್ಡಿ ಮಾತನಾಡಿದರು.
ಬಳಿಕ ಬೆಳೆಗಾರರು ಹಾಗೂ ಮಾರಾಟಗಾರರ ನಡುವೆ ಸಂವಾದ ನಡೆಯಿತು.