ಸೋಮವಾರಪೇಟೆ, ಜ. ೨೪: ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ನೀಡಿದ ಕೊಡುಗೆಗಳೇ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಶ್ರೀರಕ್ಷೆ ಯಾಗಿದ್ದು, ಪಂಚರತ್ನ ರಥಯಾತ್ರೆಯು ರಾಜ್ಯದಲ್ಲಿ ಜಾತ್ಯತೀತ ಜನತಾದಳವನ್ನು ಅಧಿಕಾರಕ್ಕೆ ತರಲಿದೆ ಎಂದು ಹಾಸನದ ಸಂಸದ, ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಭರವಸೆ ವ್ಯಕ್ತಪಡಿಸಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ೨೦೧೮ರಲ್ಲಿ ಕೊಡಗಿನಲ್ಲಿ ಭೂಕುಸಿತ ಸಂಭವಿಸಿದ ಸಂದರ್ಭ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿ ಅವರು ತೋರಿದ ಕಾಳಜಿ, ಪುನರ್ವಸತಿಗೆ ಕೈಗೊಂಡ ಕ್ರಮ, ಸಾಲಮನ್ನಾ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು, ಲೋಕೋಪಯೋಗಿ ಇಲಾಖಾ ಸಚಿವರಾಗಿದ್ದ ರೇವಣ್ಣ ಅವರು ಬಿಡುಗಡೆಗೊಳಿಸಿದ ಅನುದಾನಗಳು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಸಹಕಾರಿಯಾಗಲಿದೆ. ಕಾರ್ಯಕರ್ತರು ಪಕ್ಷದೊಂದಿಗೆ ಗಟ್ಟಿಯಾಗಿ ನಿಲ್ಲಬೇಕಿದೆ ಎಂದರು.

ಪ್ರವಾಹದಿAದ ಭೂಕುಸಿತ ಗೊಂಡು ಮನೆ ಕಳೆದುಕೊಂಡವರಿಗೆ ಪುನರ್ವಸತಿಗಾಗಿ ೮೫೦ ಮನೆಗಳ ನಿರ್ಮಾಣ, ಮೂಲಭೂತ ಸೌಕರ್ಯ ಒದಗಿಸಿರುವುದು, ಬಾಡಿಗೆ ಮನೆಯಲ್ಲಿರುವವರಿಗೆ ಮಾಸಿಕ ೨೦ ಸಾವಿರ ರೂಪಾಯಿ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ೧೨೦ ಕೋಟಿ ಅನುದಾನ ನೀಡಲಾಗಿದೆ. ಕಷ್ಟದಲ್ಲಿದ್ದ ಸಂದರ್ಭ ಸಹಾಯ ಮಾಡಿದವರನ್ನು ಕೊಡಗಿನ ಜನ ಮರೆಯುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಕೊಡಗಿನ ಕಡೆಗಣನೆ: ಕೊಡಗನ್ನು ಪ್ರತಿನಿಧಿಸುವ ಸಂಸದರು ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ತಾನು ಲೋಕಸಭೆಯಲ್ಲಿ ಕೊಡಗು ಜಿಲ್ಲೆಗೆ ರೈಲ್ವೇ ಸ್ಟೇಷನ್ ನಿರ್ಮಾಣ ಸೇರಿದಂತೆ ಕಾಫಿ ಮಂಡಳಿಗೆ ೫೦೦ ಕೋಟಿ ಪ್ಯಾಕೇಜ್ ಒದಗಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೆ. ಆದರೆ ಬಿಜೆಪಿ ಸರ್ಕಾರ ಇದಕ್ಕೆ ಸ್ಪಂದನೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಬೆಳೆಗಾರರು ಮತ್ತು ರೈತರ ಸಮಸ್ಯೆ ಸಾಕಷ್ಟಿದೆ. ಸರಕು ಸಾಗಾಣಿಕೆಯ ವೆಚ್ಚ ಅಧಿಕವಾಗಿರುವ ಹಿನ್ನೆಲೆ ಪ್ರತಿಯೊಂದು ಕೃಷಿ ಪರಿಕರಗಳ ಬೆಲೆ ಅಧಿಕವಾಗಿದೆ. ಈ ಹಿನ್ನೆಲೆ ರೈಲ್ವೇ ಸಂಪರ್ಕ ಲಭಿಸಿದರೆ ಸರಕುಸಾಗಾಣಿಕೆ ವೆಚ್ಚ ಕಡಿಮೆ ಯಾಗಲಿದೆ. ಇದರೊಂದಿಗೆ ಕಾಫಿ ಮಂಡಳಿಗೆ ೫೦೦ ಕೋಟಿ ಪ್ಯಾಕೇಜ್ ನೀಡಿ ಶೂನ್ಯ ಬಡ್ಡಿದರದಲ್ಲಿ ೭ ವರ್ಷಗಳ ಅವಧಿಗೆ ಬೆಳೆಗಾರರಿಗೆ ಸಾಲ ನೀಡುವಂತೆ ಮನವಿ ಮಾಡಿದ್ದೆ. ಆದರೆ ಕೇಂದ್ರ ಸರ್ಕಾರ ಕೊಡಗಿನ ಜನತೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಬಂದರೆ ಸಾಲಮನ್ನಾ: ಮಡಿಕೇರಿ ಕ್ಷೇತ್ರದಲ್ಲಿ ಕಳೆದ ೨ ಬಾರಿ ಸಣ್ಣ ಅಂತರದಲ್ಲಿ ಜೆಡಿಎಸ್ ಸೋತಿದೆ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದ ಪ್ರಜ್ವಲ್, ಪಂಚರತ್ನ ಯಾತ್ರೆಯು ಈ ಬಾರಿಯ ಜೆಡಿಎಸ್ ಚುನಾವಣಾ ಪ್ರಣಾಳಿಕೆಯ ಯೋಜನೆಗಳನ್ನು ಹೊಂದಿದೆ. ಈಗಾಗಲೇ ಜನತಾ ಜಲಧಾರೆಯ ಮೂಲಕ ನೀರಾವರಿಗೆ ಯೋಜನೆ ತಯಾರಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆ, ಸ್ತಿçà ಶಕ್ತಿ ಸಂಘದ ಸದಸ್ಯರ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.

ಪಕ್ಷ ಸಂಘಟನೆಗೆ ಒತ್ತು: ಕೊಡಗಿನಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಘಟಕಗಳನ್ನು ರಚಿಸಲಾಗುವುದು. ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಬೇಕು. ಯುವಕರು ಹೆಚ್ಚಾಗಿ ಜೆಡಿಎಸ್‌ನತ್ತ ಒಲವು ತೋರುತ್ತಿದ್ದು, ಪಕ್ಷದಿಂದ ಎಲ್ಲರಿಗೂ ಸ್ಥಾನಮಾನ ನೀಡಲಾಗುವುದು. ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಯಲ್ಲಿ ಯುವ ಮೀಸಲಾತಿಯಡಿ ಟಿಕೇಟ್ ನೀಡಲಾಗುವುದು ಎಂದರು.

ಮುAದೆ ಬೃಹತ್ ಸಮಾವೇಶ: ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ತಯಾರಾಗಿದೆ. ಕೊಡಗಿನಲ್ಲಿ ಮುಂದಿನ ಕೆಲ ದಿನಗಳಲ್ಲಿ ೫೦ ಸಾವಿರ ಮಂದಿಯನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲಾಗುವುದು. ಇದರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನೇಕ ನಾಯಕರು ತನ್ನ ಸಂಪರ್ಕದಲ್ಲಿದ್ದು, ಚುನಾವಣೆ ಹೊಸ್ತಿಲಿನಲ್ಲಿ ದೇವೇಗೌಡ ಅಥವಾ ಕುಮಾರಸ್ವಾಮಿ ಅವರ ಸಮ್ಮುಖ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ಕಾಂಗ್ರೆಸ್‌ಗೆ ಮತ ನೀಡಿದರೆ ವ್ಯರ್ಥ: ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ನೀಡಿದರೆ ವ್ಯರ್ಥವಾಗಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖ. ಜೆಡಿಎಸ್ ಪ್ರಾಬಲ್ಯವಿರುವ ಕಡೆಗಳಲ್ಲಿ ಖುದ್ದು ಮೋದಿ ಅವರೇ ಪ್ರಚಾರಕ್ಕೆ ಇಳಿಯುವ ಮಾಹಿತಿ ಇದೆ. ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಇಲ್ಲವೇ ಇಲ್ಲ. ಇಲ್ಲಿ ಜೆಡಿಎಸ್ ಹಾಗೂ ಬಿಜೆಪಿಗೆ ಪೈಪೋಟಿ ಇದೆ. ಕೋಮುವಾದಿ ಪಕ್ಷವನ್ನು ಸೋಲಿಸಲು ಅಲ್ಪಸಂಖ್ಯಾತರು ಜೆಡಿಎಸ್ ಪರ ನಿಲ್ಲಬೇಕಿದೆ ಎಂದರು.

ಕಳೆದ ೪೦ ವರ್ಷಗಳ ಕಾಲ ಭಾರತವನ್ನು ಒಡೆದು ಆಳಿದ ಕಾಂಗ್ರೆಸ್ ಪಕ್ಷವು, ಇದೀಗ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ. ಯಾತ್ರೆಯಲ್ಲಿ ಪೊಳ್ಳು ಭಾಷಣ ಬಿಗಿಯುತ್ತಿರುವ ರಾಹುಲ್ ಗಾಂಧಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಯಾವ ಯೋಜನೆ ಕೊಡಲಿದ್ದಾರೆ ಎಂದು ಸ್ಪಷ್ಟತೆ ನೀಡುತ್ತಿಲ್ಲ. ಇಂತಹ ರಾಷ್ಟಿçÃಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಈ ಹಿನ್ನೆಲೆ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್, ಸುರೇಶ್ ವಹಿಸಿ ಮಾತನಾಡಿ, ಬಡವರು, ರೈತರು, ದೀನದಲಿತರು ಸೇರಿದ ಎಲ್ಲಾ ವರ್ಗದ ಹಿತವನ್ನು ಕಾಪಾಡುವ ಪಕ್ಷ ಜೆಡಿಎಸ್ ಆಗಿದೆ. ಕುಮಾರಸ್ವಾಮಿ ಅವರು ಕೊಡಗಿಗೆ ನೀಡಿದ ಕೊಡುಗೆಗಳು ಅಪಾರ. ಈ ಬಾರಿ ಜೆಡಿಎಸ್ ಬೆಂಬಲಿಸದಿದ್ದರೆ ಕಾವೇರಿ ಮಾತೆ ಕ್ಷಮಿಸಲ್ಲ ಎಂದು ‘ತಮ್ಮ’ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡಗಿನ ೧೨,೫೦೦ ಮಂದಿ ರೈತರ ಸಾಲಮನ್ನಾ ಮಾಡಿದ್ದಾರೆ. ನಂತರದ ಬಿಜೆಪಿ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ. ಕ್ಷೇತ್ರದ ಶಾಸಕರು ತಮ್ಮ ಕಾರಿನಲ್ಲಿ ಗುದ್ದಲಿ ಹಿಡಿದುಕೊಂಡು ಭೂಮಿ ಪೂಜೆ ಮಾಡುತ್ತಿದ್ದಾರೆ. ಆದರೆ ಕಾಮಗಾರಿ ಪ್ರಾರಂಭಗೊಳ್ಳುತ್ತಿಲ್ಲ. ನಮ್ಮ ಒಗ್ಗಟ್ಟಿನ ಕೊರತೆಯಿಂದ ಮಾತ್ರ ಬಿಜೆಪಿ ಗೆಲ್ಲುತ್ತಿದೆ. ಈ ಬಾರಿ ಜೆಡಿಎಸ್ ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಸಹ ಬಿಜೆಪಿಯ ಶಾಸಕರ ಬದಲಾವಣೆ ಮಾಡಿಯೇ ಸಿದ್ದ ಎಂದರು.

ಸಭೆಯಲ್ಲಿ ಪಕ್ಷದ ಮುಖಂಡರು ಗಳಾದ ಕೊಡ್ಲಿಪೇಟೆಯ ಕೆ.ಎನ್. ವಸಂತ್ ಮಾತನಾಡಿದರು. ವೇದಿಕೆಯಲ್ಲಿ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ, ಜೆಡಿಎಸ್ ಮುಖಂಡರುಗಳಾದ ಕೆ.ಟಿ. ಪರಮೇಶ್, ಎಂ.ಎ. ರುಬೀನಾ, ಜಲಾ ಹೂವಯ್ಯ, ಜಾನಕಿ ವೆಂಕಟೇಶ್, ಪುಷ್ಪ ರಾಜೇಶ್, ಕಾಟ್ನಮನೆ ವಿಠಲ್ ಗೌಡ, ಬಗ್ಗನ ಅನಿಲ್, ಪಿ.ಡಿ. ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.