ಗೋಣಿಕೊಪ್ಪಲು, ಜ. ೨೫: ಇಂಡಿಯನ್ ರಿಪೋಟರ್ಸ್ ಅಂಡ್ ಮೀಡಿಯಾ ಪರ್ಸನ್ಸ್ ಯೂನಿಯನ್ ಹೆಸರಿನ ಪತ್ರಕರ್ತರ ಸಂಘಟನೆ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಕರ್ನಾಟಕದಲ್ಲಿ ತಾ. ೨೯ ರಂದು ಅಸ್ತಿತ್ವಕ್ಕೆ ಬರಲಿದೆ.
ಕೇರಳ ಪತ್ರಕರ್ತರ ಒಕ್ಕೂಟವು ರಾಜ್ಯದ ಟಿ.ಎಲ್. ಶ್ರೀನಿವಾಸ್ ಅವರಿಗೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಗೋವಾ ರಾಜ್ಯಗಳ ಪತ್ರಕರ್ತ ಸಂಘಟನೆಯ ಜವಾಬ್ದಾರಿ ವಹಿಸಿದ್ದು, ತಾ. ೨೯ ರಂದು ಕರ್ನಾಟಕ ರಾಜ್ಯ ಪತ್ರಕರ್ತರ ಯೂನಿಯನ್‌ನ ಸ್ಥಾಪಕ ಅಧ್ಯಕ್ಷರಾಗಿ ಮೈಸೂರು ಜಲದರ್ಶಿನಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೇರಳ ರಾಜ್ಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ತಂಡ ಆಗಮಿಸಲಿದ್ದು ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರು ಆಗಮಿಸಲಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮ್ಯೆಸೂರು ಜಲದರ್ಶಿನಿಯಲ್ಲಿ ಮೊದಲ ಸಭೆ ನಡೆಯಲಿದ್ದು, ೩೦ ಜಿಲ್ಲೆಗಳ ಪ್ರವಾಸದ ನಂತರ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದು ಎಂದರು. ದಕ್ಷಿಣ ಭಾರತ ಸಂಘಟನೆಯ ನಂತರ ಕರ್ನಾಟಕದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಿದ್ದು, ಡಿಸೆಂಬರ್ ೨೦೨೩ಕ್ಕೂ ಮುನ್ನ ಕನಿಷ್ಟ ೧೦೦೦ ಸದಸ್ಯತನ ನೋಂದಾಯಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.