ವೀರಾಜಪೇಟೆ, ಜ. ೨೨: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿ ಕವಿವರ್ಯರು ಸ್ವರಚಿತ ಕಾವ್ಯಗಳನ್ನು ವಾಚಿಸಿ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

೩ನೇ ತರಗತಿಯ ಕು.ಸಾನ್ವಿ ಯೋಗೇಶ್ವರಿ ತನ್ನ ಹಾವ ಭಾವದೊಂದಿಗೆ ಚಿಟ್ಟೆ ಎಂಬ ಕವಿತೆಯನ್ನು ವಾಚಿಸಿ ಜನಮನ ಗೆದ್ದಳು. ಇನ್ನುಳಿದಂತೆ ವಿದ್ಯಾರ್ಥಿಗಳು ಗೆಳತಿ, ಅಮ್ಮ ಹೀಗೆ ಹೆಣ್ಣಿನ ಬಗ್ಗೆ ಕವಿತೆ ವಾಚಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಅವರು ಮಾತನಾಡಿ, ರವಿ ಕಾಣದನ್ನು ಕವಿ ಕಂಡ ಎಂಬ ಮಾತಿದೆ. ನಮ್ಮ ಭಾವನೆಗಳು, ಕಲ್ಪನೆಗಳನ್ನು ಪದಪುಂಜಗಳ ಅರ್ಥಗರ್ಭಿತ ಜೋಡಣೆಯ ಮೂಲಕ ಲಿಖಿತ ಸ್ವರೂಪ ಕೊಟ್ಟು ಚೆಂದಗಾಣಿಸುವ ಅದ್ಭುತ ಶಕ್ತಿ ಕವಿಯದ್ದು. ಒಂದು ವಿಷಯವನ್ನು ನಾವು ಊಹಿಸಲೂ ಸಾಧ್ಯವಿರದ ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸಾಮರ್ಥ್ಯ ಕವಿಗಿದೆ ಎಂದರು.

ಕವಿಗಳಾದ ಪುಗ್ಗೇರ ಸುಮಿ ಸುಬ್ಬಯ್ಯ, ಪಿ.ಬಿ. ಮಂಜುನಾಥ್, ಕಿಶೋರ್, ಕೆ.ಎಂ. ಸೂರಜ್, ಬಿ.ಹೆಚ್ ಪ್ರಶಾಂತ್, ಎಂ.ಎ. ಯೋಗೇಶ್ವರಿ, ಸಾನ್ವಿ ಯೋಗೇಶ್ವರಿ, ನಳಿನಿ ಬಿಂದು, ಕೆ.ಆರ್. ಅನುಷಾ, ತಾಜುದ್ದೀನ್, ತೌಸಿ ಅಹಮ್ಮದ್, ಪಿ.ಎಂ. ಅರ್ಚನ, ಎನ್.ಕೆ. ಚಾರಿಕ, ಎಂ.ಕೆ. ಧನ್ಯ ಮುಂತಾದವರು ಕವನ ವಾಚಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಎಸ್.ವಿ. ನರಸಿಂಹನ್ ಉಪಸ್ಥಿತರಿದ್ದರು. ವಿಮಲಾ ದಶರಥ ಸ್ವಾಗತಿಸಿದರೆ, ಕೆ.ಸಿ. ಗೀತಾಂಜಲಿ ನಿರೂಪಿಸಿದರು.