ಸೋಮವಾರಪೇಟೆ, ಜ. ೨೨: ನಡೆದಾಡುವ ದೇವರೆಂದೇ ಖ್ಯಾತನಾಮರಾಗಿದ್ದ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಜೀವನಾದರ್ಶಗಳು ಸಾರ್ವಕಾಲಿಕ ವಾಗಿದ್ದು, ಅವರ ಮಾರ್ಗದರ್ಶನದಂತೆ ಎಲ್ಲರೂ ಜೀವಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಸೋಮವಾರಪೇಟೆಯ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಆನೆಕೆರೆ ಸಮೀಪವಿರುವ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಸ್ವಾಮೀಜಿಗಳ ೪ನೇ ವರ್ಷದ ಪುಣ್ಯಸ್ಮರಣೆ-ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಸವ ತತ್ವದ ಮೇಲೆ ನಂಬಿಕೆಯಿಟ್ಟು ಆ ತತ್ವದಂತೆಯೇ ತಮ್ಮ ಜೀವಮಾನವನ್ನು ಸವೆಸಿದ ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಎಲ್ಲಾ ಧರ್ಮ, ವರ್ಗಗಳನ್ನು ಸಮಾನವಾಗಿ ಕಂಡು ಸೇವೆಯೇ ಪರಮೋಚ್ಚ ಕಾಯಕವೆಂದು ಭಾವಿಸಿ ನುಡಿದಂತೆ ನಡೆದ ಶ್ರೀಗಳ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ರಂಜನ್ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವಾಪಟ್ಟಣ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಕ್ಷರ, ಅನ್ನ, ಆಶ್ರಯದ ಮೂಲಕ ಸಮಾಜದ ತಾಯಿಯಾಗಿ ಜೀವಿತದ ಕೊನೆಯವರೆಗೂ ಸಮಾಜಕ್ಕಾಗಿಯೇ ಬದುಕಿದ ಶ್ರೀಗಳ ಬಗ್ಗೆ ಯುವ ಜನಾಂಗಕ್ಕೆ ತಿಳಿಸಬೇಕಿದೆ. ಅವರ ತತ್ತಾ÷್ವದರ್ಶಗಳ ಪಾಲನೆಯ ಅಗತ್ಯತೆ ಬಗ್ಗೆ ತಿಳುವಳಿಕೆ ಮೂಡಿಸಬೇಕಿದೆ ಎಂದರು.

ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ನಿವೃತ್ತ ಪ್ರಾಧ್ಯಾಪಕ ಧರ್ಮಪ್ಪ ಅವರುಗಳು ಉಪಸ್ಥಿತರಿದ್ದು, ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಶೀಲಾ ಡಿಸೋಜ, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಹಾಲಪ್ಪ, ವಿದ್ಯಾ ನರ್ಸಿಂಗ್ ಇನ್ಸ್ಟಿಟ್ಯೂಟ್‌ನ ಅಲೀಮಾ, ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಆನೆಕೆರೆ-ಬಸವೇಶ್ವರ ರಸ್ತೆವರೆಗಿನ ಜಂಕ್ಷನ್‌ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತವೆಂದು ನಾಮಕರಣ ಮಾಡಲಾಗಿದ್ದು, ಇದರ ಫಲಕವನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ನಂತರ ನೂರಾರು ಮಂದಿಗೆ ಅನ್ನದಾಸೋಹ ನೆರವೇರಿತು.