ದುಗ್ಗಳ ಸದಾನಂದ.

ನಾಪೋಕ್ಲು, ಜ. ೨೦: ಕಾಮಗಾರಿ ಆದೇಶದ ಪ್ರತಿಗೆ ಪಂಚಾಯ್ತಿ ಅಧ್ಯಕ್ಷರ ಸಹಿಯನ್ನೇ ಪೋರ್ಜರಿ ಮಾಡಿರುವ ಪ್ರಕರಣವೊಂದು ನಾಪೋಕ್ಲು ಗ್ರಾಮ ಪಂಚಾಯ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದ ಹಿಂದೆ ಅಧಿಕಾರಿಗಳÀ ಕೈವಾಡದ ಬಲವಾದ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪರಿಶಿಷ್ಟ ಮೀಸಲಾತಿಯಿಂದ ಆಯ್ಕೆಯಾಗಿರುವ ಅಧ್ಯಕ್ಷರನ್ನೇ ಕತ್ತಲಲ್ಲಿಟ್ಟು, ಭಾರೀ ಗೋಲ್‌ಮಾಲ್ ನಡೆಸಿರುವ ಶಂಕೆಯೂ ವ್ಯಕ್ತವಾಗಿದೆ.

ಉಪಾಧ್ಯಕ್ಷರಾಗಿದ್ದ ಖುರೇಷಿ ಎಂಬವರು, ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸ್ಥಾನ ಬಿಟ್ಟುಕೊಟ್ಟಿದ್ದರು. ಖುರೇಷಿ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪೋರ್ಜರಿ ಪ್ರಕರಣವನ್ನು, ಮಂಗಳವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಮಾಸಿಕ ಸಾಮಾನ್ಯ ಸಭೆಯಲ್ಲಿ ಸದಸ್ಯ ಬಿ.ಎಂ. ಪ್ರತೀಪ್ ಬಯಲಿಗೆಳೆದಿದ್ದಾರೆ. ಈ ಬಗ್ಗೆ ಬಿ.ಎಂ. ಪ್ರತೀಪ್ ಜೊತೆಗೆ ಅಧ್ಯಕ್ಷರು ಮಾತನಾಡಿರುವ ಆಡಿಯೋ ಲಭ್ಯವಾಗಿದೆ.

ಕಳೆದ ಎರಡು ವರ್ಷಗಳಿಂದ ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾಗಿ ಎಚ್. ಎಸ್. ಪಾರ್ವತಿ ಕಾರ್ಯನಿರ್ವಹಿಸುತ್ತಿದ್ದು, ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ಆದೇಶ ಪ್ರತಿಗೆ ನಕಲಿ ಸಹಿ ಬಿದ್ದಿರುವುದು ಅಧ್ಯಕ್ಷರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಎಚ್.ಎಸ್. ಪಾರ್ವತಿ, ಪಿಡಿಓ ಗಮನಕ್ಕೂ ತಂದಿದ್ದಾರೆ. ಬಹುಶ: ಆದೇಶ ಪ್ರತಿಯನ್ನು ಮೇಲಧಿಕಾರಿಗಳಿಗೆ ತಲುಪಿಸುವ ವೇಳೆ ಮಡಿಕೇರಿಯಲ್ಲೇ ಯಾರೋ ನಕಲಿ ಸಹಿ ಮಾಡಿರಬಹುದೆಂದು ಪಿಡಿಓ ಹೇಳಿದ್ದಾರೆ ಎನ್ನಲಾಗಿದೆ. ನಕಲಿ ಸಹಿ ಮಾಡಿರುವುದು ಪಿಡಿಓಗೆ ಗೊತ್ತಿದೆ ಎನ್ನುತ್ತಾರೆ ಅಧ್ಯಕ್ಷರು. ಮಂಗಳವಾರ ಸಭೆಯಲ್ಲಿ ಈ ಬಗ್ಗೆ ಬಿ.ಎಂ. ಪ್ರತೀಪ್ ಧ್ವನಿಯೆತ್ತಿದ್ದಾರೆ. ಈ ಬಗ್ಗೆ ಸಧ್ಯದಲ್ಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಅಧ್ಯಕ್ಷರು ಹೇಳಿದ್ದಾರೆ.