ಗೋಣಿಕೊಪ್ಪಲು, ಜ. ೧೭: ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಬಡ ಜನತೆಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಇಲಾಖೆ ಹಾಗೂ ಸರ್ಕಾರ ವಿಫಲವಾಗುತ್ತಿದೆ. ಅಧಿಕಾರಿಗಳು ಕೂಡಲೇ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ರಮೇಶ್ ಮುಂದಾಳತ್ವದಲ್ಲಿ ನೂರಾರು ಆದಿವಾಸಿಗಳು ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳ ಕಚೇರಿಯ ಮುಂದೆ ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಚಾಲಕ ರಮೇಶ್. ಕೊಡಗು ಜಿಲ್ಲೆಯಲ್ಲಿ ೪,೫೦೦ಕ್ಕೂ ಅಧಿಕ ಆದಿವಾಸಿ ಕುಟುಂಬಗಳು ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದು ಇವರಿಗೆ ಕೂಡಲೇ ನಿವೇಶನ ಒದಗಿಸಬೇಕು. ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ.ನಂ. ೨೯/೧ರಲ್ಲಿ ಆದಿವಾಸಿಗಳಿಗೆ ಮೀಸಲಿರಿಸಿದ ಜಾಗವನ್ನು ಕೆ.ಬಾಡಗ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಲೈನ್ ಮನೆಯಲ್ಲಿ ವಾಸ ಮಾಡುವ ಆದಿವಾಸಿಗಳಿಗೆ ಹಂಚಬೇಕು. ಚಂದನಕೆರೆ ಹಾಗೂ ತಿರುನಾಡ ಹಾಡಿಗಳ ಜನರು ಇನ್ನೂ ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಡಿಗಳ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಸುಮಾರು ೩ ಕಿ.ಮೀ.ನಷ್ಟು ಇದ್ದು ರಸ್ತೆಯು ಇಕ್ಕಟ್ಟಾಗಿದೆ. ಈ ಹಾಡಿಗಳಿಂದ ೨೫ಕ್ಕೂ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ಮಳೆಗಾಲ ಸಂದರ್ಭ ವನ್ಯ ಪ್ರಾಣಿಗಳ ಭಯದಿಂದಲೇ ೫ ಕಿ.ಮೀ. ನಡೆದು ಶಾಲೆಗೆ ತೆರಳಬೇಕಾಗಿದೆ. ಅಲ್ಲದೆ ಚಂದನಕೆರೆ ಹಾಡಿಯ ಜನರಿಗೆ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಿಸಿದ್ದು, ಮಳೆಗಾಲ ಸಂದರ್ಭ ಬಾವಿಯೊಳಗಡೆ ಕಲುಷಿತ ನೀರು ಸೇರಿ ಕುಡಿಯಲು ಯೋಗ್ಯವಿರುವುದಿಲ್ಲ.

ತಿರುನಾಡ ಹಾಡಿಯಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಒಂದು ಕಿರು ಸೇತುವೆ ಕಾಮಗಾರಿಯ ಕೆಲಸವು ಎರಡು ವರ್ಷಗಳ ಹಿಂದೆಯೇ ತೊಡಗಿದ್ದು ಈ ಕಾಮಗಾರಿಯು ಇನ್ನೂ ಕೂಡ ಪೂರ್ಣಗೊಂಡಿಲ್ಲ. ತಿರುನಾಡ ಹಾಡಿಯ ಸ್ಮಶಾನ ಜಾಗವು ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವು ದರಿಂದ ಸ್ಮಶಾನಕ್ಕೆ ತೆರಳುವ ಸಂದರ್ಭ ಈ ಭಾಗದ ಜನರು ಸುಮಾರು ೧೫.ಕಿ.ಮೀ.ನಷ್ಟು ದೂರ ಸುತ್ತಿ ತೆರಳಬೇಕಾಗಿದೆ.ಇಂತಹ ಸಮಸ್ಯೆಗಳನ್ನು ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಆದಷ್ಟೂ ಬೇಗನೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಹೋರಾಟಗಾರರ ಮನವಿ ಸ್ವೀಕರಿಸಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗಿರಿಜನ ಕಲ್ಯಾಣಾಧಿಕಾರಿ ಕಚೇರಿಯ ಅಧಿಕಾರಿ ನವೀನ್ ಈ ವೇಳೆ ಹಾಜರಿದ್ದರು., ಹೋರಾಟ ಸಮಿತಿಯ ತಾಲೂಕು ಕಾರ್ಯದರ್ಶಿ ಬಿ.ಕೆ. ಶಾಂತಿ ಚೂರಿಕಾಡು, ಬೇಬಿ, ಬಿಂದು, ಪ್ರಮುಖರಾದ ಪಿ.ಆರ್. ರವಿ. ಪಿ.ಟಿ. ಲೋಕೇಶ್, ಪಿ.ಬಿ. ರಮೇಶ್, ಹರೀಶ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.