ಕೂಡಿಗೆ, ಜ. ೧೭: ಚಿಕ್ಕತ್ತೂರು ಗ್ರಾಮದ ಸಮೀಪದಲ್ಲಿರುವ ಆನೆ ಕೆರೆ ಸಮೀಪದ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮೂರು ಗ್ರಾಮಗಳ ಯುವಕರಿಗೆ ಅನುಕೂಲವಾಗುವಂತೆ ಮೂರು ಗ್ರಾಮದ ಗ್ರಾಮಸ್ಥರು ಸೇರಿ ಕಾಡು ಕಡಿದು ಮಣ್ಣು ಅಗೆಯುವ ಯಂತ್ರದ ಮೂಲಕ ಆಟದ ಮೈದಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೂರು ಗ್ರಾಮಗಳಾದ ಚಿಕ್ಕತ್ತೂರು, ದೊಡ್ಡತ್ತೂರು ಹಾಗೂ ಸುಂದರನಗರಗಳಲ್ಲಿ ಕಳೆದ ೪೦ ವರ್ಷಗಳಿಂದ ಆಟದ ಮೈದಾನ ಸೌಲಭ್ಯ ಇಲ್ಲದೆ ಖಾಸಗಿಯವರ ಹೊಲದಲ್ಲಿ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು. ಇದಕ್ಕೆ ಸಂಬAಧಿಸಿದAತೆ ಗ್ರಾಮಸ್ಥರು, ಯುವಕರು, ಸೇರಿದಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಗ್ರಾಮ ಸಭೆ ಸೇರಿದಂತೆ ಮಾಸಿಕ ಸಭೆಯಲ್ಲಿ ಸದಸ್ಯರು ಚರ್ಚಿಸಿ ಜಾಗವನ್ನು ಗುರುತಿಸುವ ತೀರ್ಮಾನ ತೆಗೆದುಕೊಂಡಿದ್ದರು. ಅದರಂತೆ ಗ್ರಾಮಸ್ಥರು ಕಂದಾಯ ಇಲಾಖೆಯ ಸಹಕಾರದೊಂದಿಗೆ ಮತ್ತು ಶಾಸಕರ ಸೂಚನೆಯಂತೆ ಕಂದಾಯ ಇಲಾಖೆಯ ಜಾಗದಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಶ್ರಮದಾನದ ಮೂಲಕ ಕೆಲಸ ಆರಂಭಿಸಿದ್ದಾರೆ.
ಆಟದ ಮೈದಾನದ ಕೆಲಸದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೂ ತೊಡಗಿದ್ದಾರೆ. ಶಾಸಕರ ಸೂಚನೆ ಮೇರೆಗೆ ಕಂದಾಯ ಇಲಾಖೆಗೆ ಸೇರಿದ ಎರಡು ಎಕರೆ ಪ್ರದೇಶವನ್ನು ತಾತ್ಕಾಲಿಕ ಮೈದಾನವಾಗಿ ಬಳಸಲು ಅವಕಾಶ ದೊರೆತಿದೆ. ಅಂದಾಜು ಎರಡು ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರು, ದಾನಿಗಳು ಒಗ್ಗೂಡಿ ಕ್ರೀಡಾ ಮೈದಾನ ಸಿದ್ಧಪಡಿಸುತ್ತಿದ್ದಾರೆ. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ದಿನೇಶ್, ಭಾಗ್ಯ, ಖತೀಜಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಗುಜೇಂದ್ರ, ಸಿ.ಸಿ. ಸ್ವಾಮಿ ಮತ್ತು ಗ್ರಾಮಸ್ಥರು ಹಾಜರಿದ್ದರು.
ಶಾಸಕರು ವೈಯಕ್ತಿಕವಾಗಿ ೫೦ ಸಾವಿರ ಒದಗಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು, ಕ್ರೀಡಾಪ್ರೇಮಿಗಳ ಸಹಕಾರದಿಂದ ಈ ಭಾಗದ ಕ್ರೀಡಾಪಟುಗಳಿಗಾಗಿ ಮೈದಾನ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಶೀಘ್ರದಲ್ಲೇ ಮೈದಾನವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಸೇರಿದಂತೆ ಯುವಕ ಮಂಡಳಿ ಸದಸ್ಯರು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.