ಗೋಣಿಕೊಪ್ಪಲು, ಜ. ೧೭: ಕಳೆದ ಒಂದು ವಾರದ ಹಿಂದೆ ಗೋಣಿಕೊಪ್ಪ ನಗರದ ಹೃದಯ ಭಾಗದಲ್ಲಿರುವ ಬೇರು ಪೈಂಟ್ ಅಂಗಡಿಗೆ ಬೆಂಕಿ ಅವಘಡ ಸಂಭವಿಸಿದ್ದು ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದ ಹಿನ್ನಲೆಯಲ್ಲಿ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮುಂದಾಳತ್ವದಲ್ಲಿ ಗೋಣಿಕೊಪ್ಪ ಸೆಸ್ಕ್ ಎಇಇ ನೀಲ್‌ಶೆಟ್ಟಿಯವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಸಮಗ್ರ ವರದಿ ಸಲ್ಲಿಸಿದರು.
ನಗರದಲ್ಲಿ ಆಗಿಂದ್ದಾಗಿಯೇ ವಿದ್ಯುತ್ ಅವಘಡಗಳು ಸಂಭವಿಸುತ್ತಿದ್ದು ಹಲವು ವರ್ತಕರ ಕಟ್ಟಡ ಸೇರಿದಂತೆ ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗುತ್ತಿದೆ. ಸೆಸ್ಕ್ ಕಚೇರಿಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾಗುತ್ತಿರುವುದೇ ಇದಕ್ಕೆ ಮೂಲ ಕಾರಣ. ಹೀಗಾಗಿ ಇಲಾಖೆಯು ನೊಂದ ಗ್ರಾಹಕನಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸುನೀಲ್ ಮಾದಪ್ಪ ಒತ್ತಾಯಿಸಿದರು.
ಘಟನೆಯ ದಿನದಂದು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಹಾಸನ ಭಾಗದಿಂದ ಆಗಮಿಸಿದ ಸೆಸ್ಕ್ ಅಧಿಕಾರಿಗಳು ಬೆಂಕಿಗೆ ಅಹುತಿಯಾದ ವರ್ತಕರನ್ನು ಹಾಗೂ ಅವರ ಕುಟುಂಬದ ಸದಸ್ಯರನ್ನು ಮಾತನಾಡಿಸದೆ ತಮಗೆ ಬೇಕಾದ ರೀತಿಯಲ್ಲಿ ಅಕ್ಕಪಕ್ಕದ ಅಂಗಡಿ ಮಳಿಗೆಯ ಕೆಲವರನ್ನು ಮಾತನಾಡಿಸಿ ತಮಗೆ ಬೇಕಾದ ರೀತಿಯಲ್ಲಿ ಮಾಹಿತಿ ಪಡೆದು ತೆರಳಿದ್ದಾರೆ. ವಾರ ಕಳೆದರೂ ಬೆಂಕಿ ಅವಘಡಕ್ಕೆ ತುತ್ತಾದ ಬೇರು ಪೈಂಟ್ ಅಂಗಡಿಯ ಮಾಲೀಕರಾದ ಇಮ್ತರಾಮ್ ಮನೆಯವರ ಯಾವುದೇ ಮಾಹಿತಿಯನ್ನು ಲಿಖಿತ ರೂಪದಲ್ಲಿ ಪಡೆಯದೆ ಅನ್ಯಾಯ ಮಾಡಿದ್ದಾರೆ ಎಂದು ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಗಂಭೀರ ಆರೋಪ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಜಿಲ್ಲಾಧ್ಯಕ್ಷ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ಬಿ.ಎನ್.ಪ್ರಕಾಶ್ ಧ್ವನಿಗೂಡಿಸಿದರು. ವಾಣಿಜ್ಯ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಆದರೆ ಇಲಾಖೆಯ ವಿದ್ಯುತ್ ವಿಚಾರದಲ್ಲಿ ಇನ್ನೂ ಕೂಡ ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ದೊರಕುತ್ತಿಲ್ಲ. ಪ್ರತಿ ನಿತ್ಯ ವಿದ್ಯುತ್ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ವರ್ಷದಲ್ಲಿ ಆಗಿಂದ್ದಾಗಿಯೇ ಅಗ್ನಿ ಅವಘಡ ನಡೆಯುತ್ತಿದೆ. ಇದರ ಹೊಣೆಯನ್ನು ಸೆಸ್ಕ್ ಇಲಾಖೆಯೇ ಹೊರಬೇಕು ಎಂದು ಕಿಡಿ ಕಾರಿದರು.ಬೆಂಕಿ ಅವಘಡಕ್ಕೆ ತುತ್ತಾದ ಬೇರು ಪೈಂಟ್ ಅಂಗಡಿಯ ಮಾಲೀಕÀ ಇಮ್ತರಾಮ್ ಪ್ರತಿಕ್ರಿಯಿಸಿ ಉದ್ದೇಶಪೂರ್ವಕವಾಗಿಯೇ ಬೆಂಕಿ ಅವಘಡ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಷಯ. ಕಳೆದ ಹಲವು ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದೇನೆ. ನ್ಯಾಯಯುತವಾಗಿ ಜೀವನ ಸಾಗಿಸುತ್ತಿದ್ದೇನೆ, ಮಳಿಗೆಗೆ ಜೀವ ವಿಮೆ ಮಾಡಿರಲಿಲ್ಲ. ಕೋಟ್ಯಾಂತರ ನಷ್ಟ ಸಂಭವಿಸಿರುವುದರಿAದ ಕಷ್ಟಕ್ಕೆ ಸಿಲುಕಿದ್ದೇನೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿ ಸಂಭವಿಸಿದೆ. ಅಧಿಕಾರಿಗಳು ಇಲ್ಲಿಯ ತನಕ ನಮ್ಮ ಮನೆಯವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರ ಪಡೆದಿಲ್ಲ. ಅಂದು ಕಟ್ಟಡದಲ್ಲಿರುವ ಮನೆಯಲ್ಲಿ ೧೧ ಮಂದಿ ವಾಸವಿದ್ದರು. ಮಧ್ಯರಾತ್ರಿಯ ವೇಳೆ ಘಟನೆ ಸಂಭವಿಸಿದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗುವ ಸಂಭವವಿತ್ತು. ಮುಂಜಾನೆಯ ವೇಳೆ ಘಟನೆ ನಡೆದಾಗ ಸ್ನೇಹಿತರು ತಿಳಿಸಿದ ನಂತರವೇ ವಿಷಯ ತಿಳಿದಿದೆ. ನಮ್ಮ ಕಷ್ಟವನ್ನು ಹಾಗೂ ಆದ ನಷ್ಟವನ್ನು ಪರಿಗಣಿಸಿ ಇಲಾಖೆಯು ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಗೋಣಿಕೊಪ್ಪ ಪಟ್ಟಣದ ವರ್ತಕರು ಹಾಗೂ ನಿವಾಸಿಗಳು ಸೆಸ್ಕ್ ವತಿಯಿಂದ ಸರಾಬರಾಜಾಗುತ್ತಿರುವ ವಿದ್ಯುತ್‌ನ ತಾಂತ್ರಿಕ ಲೋಪ ದೋಷಗಳಿಂದ ನಷ್ಟ ಅನುಭವಿಸುತ್ತಿದ್ದು, ಹಲವು ವರ್ತಕರ ಬದುಕು ಬೀದಿಗೆ ಬಂದಿದೆ. ಸರಭರಾಜಾಗುತ್ತಿರುವ ವಿದ್ಯುತ್‌ನಲ್ಲಿ ಕ್ಷಣಕ್ಕೆ ಬದಲಾಗುವ ಅತಿ ವೋಲ್ಟೇಜ್, ಲೋ ವೋಲ್ಟೇಜ್, ಸಿಂಗಲ್ ಪೇಸ್ ನಂತಹ ಸಮಸ್ಯೆಗಳು ದಿನನಿತ್ಯ ಸಾಮಾನ್ಯವಾಗಿದೆ. ಇದರಿಂದ ನಿರಂತರವಾಗಿ ಗ್ರಾಹಕರ ವಿದ್ಯುತ್ ಉಪಕರಣಗಳು, ಸಲಕರಣೆಗಳು ಹಾಳಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನದಲ್ಲಿ ಕ್ರಮಕೈಗೊಳ್ಳುವಂತೆ ಚೇಂಬರ್‌ನ ಖಜಾಂಜಿ ಮನೋಹರ್ ಹಾಗೂ ನಿರ್ದೇಶಕ ಗಣೇಶ್ ರೈ ಅಧಿಕಾರಿಗಳ ಗಮನ ಸೆಳೆದರು.
ಗೋಣಿಕೊಪ್ಪಲು ವರ್ತಕರ ಸಂಘದ ಮನವಿ ಸ್ವೀಕರಿಸಿದ ಗೋಣಿಕೊಪ್ಪ ಸೆಸ್ಕ್ ಎಇಇ ನೀಲ್‌ಶೆಟ್ಟಿ ಸ್ಥಳದಿಂದ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳಿಗೆ ಮಾತನಾಡಿ ಘಟನೆಗೆ ಸಂಬAಧಿಸಿದAತೆ ಮತ್ತೊಮ್ಮೆ ಸಮಗ್ರ ವರದಿ ಪಡೆಯಲು ಮನವಿ ಮಾಡಿದರು. ಅಗತ್ಯವಿದ್ದಲ್ಲಿ ಇಲಾಖೆಯ ಅಧಿಕಾರಿಗಳಿಂದ ವರದಿಯನ್ನು ಕಳುಹಿಸಿ ಕೊಡಲಾಗುವುದು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಕೋರಿದರು. ಆಗಮಿಸಿದ ವರ್ತಕರ ಪದಾಧಿಕಾರಿಗಳಿಗೆ ಘಟನೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ವಿಷಯಗಳನ್ನು ಮಂಡಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಭೇಟಿಯ ವೇಳೆ ಚೇಂಬರ್‌ನ ಕಾರ್ಯದರ್ಶಿ ತೆಕ್ಕಡ ಕಾಶಿ, ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.