ಸಿದ್ದಾಪುರ, ಜ. ೧೭: ಮಾಲ್ದಾರೆ ಗ್ರಾಮದ ಅವರೆಗುಂದ ಬಳಿಯ ಆಸ್ತಾನದಲ್ಲಿ ಹುಲಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖಾಧಿ ಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಗ್ರಾಮದ ಆಸ್ತಾನ ಕೆರೆಯ ಬಳಿ ಅಂದಾಜು ೧೨ ವರ್ಷ ಪ್ರಾಯದ ಈ ಹಿಂದೆ ಜಾನುವಾರಗಳ ಮೇಲೆ ದಾಳಿ ನಡೆಸಿದ್ದ ಭಕ್ಷಕ ಹುಲಿಯನ್ನು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಾನೆಗಳ ನೆರವಿನಿಂದ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿ ತಾ. ೧೭ರ ಸಂಜೆ ರಕ್ಷಿಸಿದರು.
ನಿತ್ರಾಣಗೊಂಡು ಅನಾರೋಗ್ಯ ದಿಂದ ಬಳಲುತ್ತಿದ್ದ ಹುಲಿಯೊಂದು ಕಂಡುಬAದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಸಾಕಾನೆಗಳಾದ ಪ್ರಶಾಂತ್, ಸುಗ್ರಿವ, ಶ್ರೀರಾಂ, ವಿಕ್ರಂ, ಹರ್ಷ, ಈಶ್ವರ ಸಹಾಯದೊಂದಿಗೆ ೫೦ ಮಂದಿ ಅರಣ್ಯ ಸಿಬ್ಬಂದಿಗಳು ಹುಲಿಯನ್ನು ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ.
ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅರವಳಿಕೆ ಪ್ರಯೋಗಿಸಿದರು. ಚುಚ್ಚುಮದ್ದು ತಗುಲಿದ ಹುಲಿ ಸ್ವಲ್ಪ ದೂರ ಓಡಿ ಮಾಲ್ದಾರೆ ಆಸ್ತಾನ ಬಳಿ ಕುಸಿದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಲೆ ಹಾಕಿ ಹುಲಿಯನ್ನು ಸೆರೆ ಹಿಡಿದರು.
ಆಹಾರ ಸೇವಿಸದೆ ನಿತ್ರಾಣ ಗೊಂಡಿದ್ದ ಹುಲಿಗೆ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಹಾಗೂ ಡಾ. ರಮೇಶ್ ಚಿಕಿತ್ಸೆ ನೀಡಿದರು. ನಂತರ ಮೈಸೂರು ಬಳಿಯ ಕೂರ್ಗಳ್ಳಿಗೆ ವಾಹನದಲ್ಲಿ ರವಾನಿಸಲಾಯಿತು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಎಫ್‌ಓ ಎಂ.ಟಿ. ದೇವಯ್ಯ, ಎಸಿಎಫ್ ಎ.ಎ. ಗೋಪಾಲ, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ, ತಿತಿಮತಿ ಆರ್‌ಎಫ್‌ಓ ಅಶೋಕ್, ವೀರಾಜಪೇಟೆ ಆರ್‌ಎಫ್‌ಓ ದೇವಯ್ಯ ಹಾಜರಿದ್ದರು.
ಮಾಲ್ದಾರೆ ಭಾಗದಲ್ಲಿ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಒಂದನ್ನು ಕಳೆದ ಕೆಲವು ತಿಂಗಳ ಹಿಂದೆ ಸೆರೆ ಹಿಡಿಯಲಾಗಿತ್ತು ಇದೀಗ ಮತ್ತೊಂದು ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಇಂದು ಸೆರೆ ಹಿಡಿದ ಹುಲಿಯನ್ನು ಕೂರ್ಗಳ್ಳಿಯಲ್ಲಿ ಆರೈಕೆ ಮಾಡಿದ ನಂತರ ಮೈಸೂರಿನ ಮೃಗಾಲಯಕ್ಕೆ ಬಿಡಲಾಗುವುದೆಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ತಿಳಿಸಿದ್ದಾರೆ.
ವರದಿ: ವಾಸು ಎ.ಎನ್.