ಮಡಿಕೇರಿ, ಜ. ೧೭: ಬಿಟ್ಟಂಗಾಲ ನಾಂಗಾಲ ಗ್ರಾಮದಲ್ಲಿ ಭಾನುವಾರ ಸಂಜೆ ಬುಟ್ಟಿಯಂಡ ಆರತಿ ಎಂಬ ಯುವತಿಯನ್ನು ಭೀಕರ ರೀತಿಯಲ್ಲಿ ಕತ್ತಿಯಿಂದ ಕಡಿದು ಕೊಲೆಗೈದಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ತನಿಖೆ ಮುಂದುವರಿದಿದೆ. ಕೃತ್ಯವೆಸಗಿರುವುದಾಗಿ ಹೇಳಲಾಗಿರುವ ಶಂಕಿತ ಆರೋಪಿ ಕೊಟ್ಟಂಡ ಟವಿ ತಿಮ್ಮಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ದುಷ್ಕೃತ್ಯದ ಬಳಿಕ ಈ ಯುವಕ ನಾಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಗೊಂಡಿದೆಯಾದರೂ ಮೃತದೇಹ ಮಾತ್ರ ಪತ್ತೆಯಾಗಿಲ್ಲ. ನಾಂಗಾಲ ಸನಿಹದ ಕೆರೆ ಮತ್ತಿತರ ಕಡೆಗಳಲ್ಲಿ ಶೋಧ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹತ್ಯೆಗೀಡಾದ ಯುವತಿ ಆರತಿಯ ಮನೆ ಸನಿಹ ಈತನ ಹೆಲ್ಮೆಟ್, ನೀರಿನ ಬಾಟಲಿ ಹಾಗೂ ಟವಲ್ ಒಂದು ಪತ್ತೆಯಾಗಿತ್ತು. ಕೃತ್ಯಕ್ಕೆ ಬಳಸಿದ್ದ ಕತ್ತಿಯೂ ರಕ್ತಸಿಕ್ತವಾಗಿ ತೋಟದಲ್ಲಿ ದೊರೆತಿದೆ. ಈತ ಧರಿಸಿದ್ದನೆನ್ನಲಾಗಿದ್ದ ಕೋಟ್ ಹಾಗೂ ಬೈಕ್ ಆರೋಪಿತನ ಮನೆಯ ಬಳಿ ಗೋಚರಿಸಿದೆ. ಆದರೆ ಆತ್ಮಹತ್ಯೆಯ ಸಂಶಯಕ್ಕೆ ಕಾರಣವಾಗಿರುವುದು ಆರತಿಯ ಮನೆ ಸನಿಹದ ಕೆರೆಯೊಂದರ ದಡದಲ್ಲಿ ಬಿಡಲಾಗಿರುವ ಚಪ್ಪಲಿ, ಸಣ್ಣ ಮೊಬೈಲ್, ಮದ್ಯ ಹಾಗೂ ವಿಷದ ಬಾಟಲಿಯಾಗಿದೆ. ಈ ಕಾರಣದಿಂದಾಗಿ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬ ಗುಮಾನಿ ಉಂಟಾಗಿತ್ತು. ಆದರೆ ಕೆರೆಯಲ್ಲಿ ನಡೆಸಿದ ಶೋಧ ಪ್ರಯೋಜನವಾಗಿಲ್ಲ.

ತನಿಖೆಯ ದಿಕ್ಕು ತಪ್ಪಿಸುವ ಯತ್ನವೇ..?

ಶಂಕಿತ ಆರೋಪಿ ಟವಿ ತಿಮ್ಮಯ್ಯ ದುಷ್ಕೃತ್ಯದ ಬಳಿಕ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾನೆಯೇ ಎಂಬ ಸಂಶಯವೂ ಎದುರಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವAತೆ ಬಿಂಬಿಸಿ ಈತ ಪರಾರಿಯಾಗಿ ದ್ದಾನೆಯೇ ಎಂಬ ಪ್ರಶ್ನೆ ಎದುರಾಗಿದೆ. ಇದೀಗ ಈ ನಿಟ್ಟಿನಲ್ಲಿಯೂ ಪೊಲೀಸರ ತನಿಖೆ ನಡೆಯುತ್ತಿದೆ. ಆರೋಪಿತ ಯುವಕನ ಮನೆ ಸುತ್ತಮುತ್ತಲಿನಲ್ಲಿ ಲಭ್ಯವಿರುವ ಸಿಸಿ ಟಿವಿಯ ಫೂಜೇಜ್‌ಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈಗಾಗಲೇ ತನಿಖೆಗೆ ಸ್ಥಳೀಯ ಪೊಲೀಸರು ಹಾಗೂ ಡಿಸಿಐಬಿ ತಂಡವನ್ನೂ ರಚಿಸಲಾಗಿದೆ.

ಅಪರಾಧ ಹಿನ್ನೆಲೆಯೂ ಇದೆ..

ಕೊಲೆಗೈದಿರುವುದಾಗಿ ಹೇಳಲಾಗುತ್ತಿರುವ ಶಂಕಿತ ಯುವಕ ಟವಿ ತಿಮ್ಮಯ್ಯ ಅಪರಾಧ ಹಿನ್ನೆಲೆಯನ್ನೂ ಹೊಂದಿದ್ದಾನೆ. ಈತ ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿ ನಂತರ ಬಿಡುಗಡೆಯಾಗಿ ಇದೀಗ ತನ್ನ ಊರಾದ ೨ನೇ ರುದ್ರಗುಪ್ಪೆಯಲ್ಲಿ ನೆಲೆಸಿದ್ದ. ಇತ್ತೀಚೆಗೆ ಹೊಸ ವರ್ಷಾಚರಣೆಯ ಸಂದರ್ಭದಲ್ಲೂ ಹೊಡೆದಾಟ ಪ್ರಕರಣವೊಂದು ನಡೆದಿದ್ದು, ಈತನ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಬೆಂಗಳೂರು ಪ್ರಕರಣ ಕೌತುಕ-ಧೂಮ್-೨ ಸಿನಿಮಾ ಪ್ರೇರಣೆ

೨೦೧೧ರಲ್ಲಿ ಬೆಂಗಳೂರಿನಲ್ಲಿದ್ದ ಈತ ಅಲ್ಲಿನ ಆಭರಣ ಮಳಿಗೆ ಯೊಂದರಲ್ಲಿ ಕಳ್ಳತನ ನಡೆಸಿದ್ದು, ಈ ಪ್ರಕರಣ ಕುತೂಹಲಕಾರಿಯಾಗಿದೆ. ಆ ಸಂದರ್ಭದಲ್ಲಿ

(ಮೊದಲ ಪುಟದಿಂದ) ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಚಿತ್ರ ಧೂಮ್-೨ ಚಿತ್ರ ವೀಕ್ಷಿಸಿ ಇದರಿಂದ ಪ್ರಭಾವಿತನಾಗಿ ಮತ್ತೊಬ್ಬ ಸ್ನೇಹಿತನೊಂದಿಗೆ ಸೇರಿ ಆಭರಣ ಕಳ್ಳತನ ನಡೆಸಲಾಗಿತ್ತು.

ಬೆಂಗಳೂರಿನ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಆಭರಣ ಮಳಿಗೆಯೊಂದ ರಿಂದ ರೂ. ೧೮ ಲಕ್ಷ ಮೌಲ್ಯದ ವಜ್ರಾಭರಣ ಅಪಹರಿಸಲಾಗಿತ್ತು. ಆಕರ್ಷಕವಾಗಿ ಉಡುಪು ಧರಿಸಿ ಸೇಲ್ಸ್ ಬಾಯ್ಸ್ ತರಹದಲ್ಲಿ ಮಳಿಗೆ ಪ್ರವೇಶಿಸಿದ್ದ ಟವಿ ತಿಮ್ಮಯ್ಯ ಹಾಗೂ ಈತನ ಇನ್ನೊಬ್ಬ ಸ್ನೇಹಿತ ಮಳಿಗೆ ಮುಚ್ಚುವ ವೇಳೆಯಲ್ಲಿ ವೇಸ್ಟ್ ಬಾಕ್ಸ್ನ ಹಿಂಭಾಗದಲ್ಲಿ ಅವಿತು ಕುಳಿತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದು, ಚಿನ್ನಾಭರಣ ಕದ್ದು ಮಳಿಗೆಯೊಳಗೇ ಇದ್ದರು. ಮರುದಿನ ಬೆಳಿಗ್ಗೆ ಮಳಿಗೆ ತೆರೆದ ನಂತರ ಇತರ ಗ್ರಾಹಕರ ಮಾದರಿಯಲ್ಲಿ ಮಳಿಗೆಯಿಂದ ಹೊರ ತೆರಳಿದ್ದರು. ಸಿಸಿ ಕೆಮರಾದಲ್ಲಿ ಗುರುತು ತಿಳಿದು ಬರದಂತೆ ವೈಟ್ ಪೌಡರ್ ಮುಖಕ್ಕೆ ಹಚ್ಚಿಕೊಂಡಿದ್ದರು. ಥೇಟ್ ಸಿನಿಮಾ ರೀತಿಯಲ್ಲಿಯೇ ಈ ಕಳ್ಳತನ ನಡೆಸಲಾಗಿತ್ತು. ನಂತರದಲ್ಲಿ ಪೊಲೀಸರ ತೀವ್ರ ತನಿಖೆಯ ಮೂಲಕ ಇವರು ಸಿಕ್ಕಿಬಿದ್ದು ಜೈಲು ಪಾಲಾಗಿದ್ದರು.

ಈ ಸಿನಿಮೀಯ ಮಾದರಿಯ ಅಪರಾಧ ಪ್ರಕರಣ ನಡೆಸಿರುವ ಹಿನ್ನೆಲೆ ಹೊಂದಿರುವ ತಿಮ್ಮಯ್ಯ ಈಗಲೂ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ನಡೆಸಿ ಪರಾರಿಯಾಗಿದ್ದಾನೆಯೇ ಎಂಬ ಸಂಶಯವೂ ಎದುರಾಗಿದ್ದು, ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.