ಮಡಿಕೇರಿ, ಜ. ೧೭: ೨೦೦೮ರಲ್ಲಿ ಪಶ್ಚಿಮ ಘಟ್ಟದ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಕಡಮಕಲ್ನಲ್ಲಿ ಅಧಿಕಾರಿಗಳಿಗೆ ಬೆದರಿಕೆ ಮತ್ತು ರಸ್ತೆ ನಿರ್ಮಾಣ ಚಟುವಟಿಕೆಯನ್ನು ಕೈಗೊಂಡಿದ್ದ ಆರೋಪದಡಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ..ಅಪ್ಪಚ್ಚು ರಂಜನ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ, ಅಂದಿನ ಜಿಲ್ಲಾಧಿಕಾರಿ ಬಲದೇವ ಕೃಷ್ಣ, ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಇವರುಗಳ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿ ಒಳಗೊಂಡ ಮೂವರ ಸಮಿತಿಗೆ ಕೇಂದ್ರ ಹಸಿರು ನ್ಯಾಯಾಧೀಕರಣ ಪೀಠ ನಿರ್ದೇಶನ ನೀಡಿದೆ.
ಮಡಿಕೇರಿ ಸಮೀಪದ ಪುಷ್ಪಗಿರಿ ಅಭಯಾರಣ್ಯದ ಕಡಮಕಲ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಸ್ತೆ ನಿರ್ಮಿಸುವಂತೆ ಹಲವಷ್ಟು ಒತ್ತಡ ಸರಕಾರದ ಮೇಲಿತ್ತು. ಈ ಹಿನ್ನೆಲೆಯಲ್ಲಿ ೧೦.೧೨.೨೦೦೮ ರಂದು ಮಡಿಕೇರಿಯಲ್ಲಿ ನಡೆದ ಜಿಲ್ಲಾ ಜಾಗೃತ ಮತ್ತು ಮೇಲ್ವಿಚಾರಣ ಸಮಿತಿ ಹಾಗೂ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪುಷ್ಪಗಿರಿ ಅಭಯಾರಣ್ಯದ ಕಡಮಕಲ್ ಮೂಲಕ ಅಲ್ಲಿಗೆ ರಸ್ತೆ ನಿರ್ಮಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು ಹಾಗೂ ಅರಣ್ಯ ಅಧಿಕಾರಿಗಳು ಅಡ್ಡಿ ಬಾರದಂತೆ ಸೂಚಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ೨೮.೧೨.೨೦೦೮ ರಂದು ವೀರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಮತ್ತು ಅಂದಿನ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಇವರುಗಳು ಗ್ರಾಮಸ್ಥರ ಬೆಂಬಲದೊAದಿಗೆ ಬೆಳಿಗ್ಗೆ ಅಭಯಾರಣ್ಯ ಪ್ರವೇಶಿಸಿದ್ದರು. ಘಟನೆಯ ಪರಿಶೀಲನೆಗೆ ಅಂದಿನ ಜಿಲ್ಲಾಧಿಕಾರಿ ಬಲದೇವ ಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಇವರುಗಳು ಕೂಡ ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಡಿಎಫ್ಓ ಅವರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಪೊಲೀಸ್ ಪುಕಾರು ನೀಡುವುದಾಗಿ ತಿಳಿಸಿ ಸ್ಥಳದಿಂದ
(ಮೊದಲ ಪುಟದಿಂದ) ಹಿಂತೆರಳಿ ದೂರು ದಾಖಲಿಸಿದ್ದರು. ಈ ಘಟನೆಯ ಆಧಾರದಲ್ಲಿ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಅರಣ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮೊಕದ್ದಮೆ ಹೂಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್ ಈ ಬಗ್ಗೆ ವರದಿ ನೀಡುವಂತೆ ಸಿಇಸಿಗೆ ಆದೇಶಿಸಿತ್ತು. ಅಂದಿನ ಸಿಇಸಿಯ ಅಧ್ಯಕ್ಷ ಪಿ.ವಿ. ಜಯಕೃಷ್ಣನ್, ಸದಸ್ಯ ಕಾರ್ಯದರ್ಶಿ ಎಸ್.ಕೆ. ಚಡ್ಡ ಸದಸ್ಯ ಮೇಘೇಂದ್ರ ವ್ಯಾಸ್ ಇವರುಗಳು ೨೦೦೯ರ ಮೇ ತಿಂಗಳ ೩ರಿಂದ ೭ರ ತನಕ ಸ್ಥಳ ಪರಿಶೀಲನೆ ನಡೆಸಿ ಕೋರ್ಟಿಗೆ ದೀರ್ಘವಾದ ವರದಿಯನ್ನು ೨೪.೧೦.೨೦೧೨ ರಂದು ಸಲ್ಲಿಸಿದ್ದರು. ವರದಿಯಲ್ಲಿ ಅಭಯಾರಣ್ಯದಲ್ಲಿ ರಸ್ತೆ ನಿರ್ಮಿಸಿರುವುದು ಎಲ್ಲಾ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ತಿಳಿಸಿತ್ತು.
ರಸ್ತೆ ನಿರ್ಮಾಣಕ್ಕೆ ಪಟ್ಟು ಹಿಡಿದು ಉದ್ರಿಕ್ತರಾಗಿದ್ದ ಗ್ರಾಮಸ್ಥರನ್ನು ಸಮಾಧಾನಪಡಿಸಲು ತಾವು ಸ್ಥಳಕ್ಕೆ ತೆರಳಿದ್ದಾಗಿ ಶಾಸಕರುಗಳು ಹೇಳಿದ್ದನ್ನು ಸಮಿತಿ ಒಪ್ಪಿಕೊಳ್ಳಲಿಲ್ಲ. ಶಾಸಕರುಗಳು ಮತ್ತು ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿದ ವರದಿಯಲ್ಲಿ ಐವರ ವಿರುದ್ಧ ಕ್ರಮದ ಅಗತ್ಯತೆ ಇದೆ ಎಂದು ಶಿಫಾರಸ್ಸು ಮಾಡಿತ್ತು. ವರದಿ ಸ್ವೀಕರಿಸಿದ ಕೋರ್ಟ್ ಸಂಪೂರ್ಣ ವಿಚಾರಣೆಯನ್ನು ಹಸಿರು ನ್ಯಾಯಾಧೀಕರಣ ಪೀಠಕ್ಕೆ ೨೦೧೫ ರಲ್ಲಿ ವರ್ಗಾಯಿಸಿತು. ಹಸಿರು ನ್ಯಾಯಾಧೀಕರಣ ಪೀಠದ ಪ್ರಮುಖರಾದ ಆದರ್ಶ್ ಕುಮಾರ್, ಸುಧೀರ್ ಅಗರ್ವಾಲ್, ಪ್ರೊ. ಸೆಂತಿಲ್ ಇವರುಗಳು ೩.೧೦.೨೦೧೭ ರಂದು ವಿಚಾರಣೆ ಆರಂಭ ಮಾಡಿದರು. ದೀರ್ಘವಾದ ವಿಚಾರಣೆಯ ಬಳಿಕ ೧೩ ಡಿಸೆಂಬರ್ ೨೦೨೨ ರಂದು ಹಸಿರು ನ್ಯಾಯಾಧೀಕರಣ ಪೀಠ ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇತರ ಇಬ್ಬರನ್ನು ಸೇರಿಸಿ ಸಮಿತಿ ರಚಿಸಿ ೧ ತಿಂಗಳ ಒಳಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶಿಸಿದೆ. ಹಸಿರು ನ್ಯಾಯಾಧೀಕರಣ ಪೀಠ ರಚಿಸಿರುವ ಜಂಟಿ ಸಮಿತಿಯಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಪರಿಸರ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಅಥವಾ ಸಿಸಿಎಫ್, ಪಿಸಿಸಿಎಫ್ ಇವರುಗಳನ್ನು ಒಳಗೊಂಡಿದೆ. ಪಿಸಿಸಿಎಫ್ ಅವರು ನೋಡೆÀಲ್ ಏಜೆನ್ಸಿಯ ರೂಪದಲ್ಲಿ ಕಾರ್ಯನಿರ್ವಹಿಸಬೇಕಿದ್ದು ಒಂದು ತಿಂಗಳ ಒಳಗೆ ಸಭೆ ನಡೆಸಿ ಮೂರು ತಿಂಗಳ ಒಳಗೆ ನಿರ್ಧಾರ ಕೈಗೊಳ್ಳಬೇಕೆಂದು ಕೂಡ ಪೀಠ ಸೂಚಿಸಿದ್ದು ಒಟ್ಟು ಜವಾಬ್ದಾರಿಯನ್ನು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಹೆಗಲಿಗೆ ನೀಡಿದೆ.