ಟ್ಯಾಕ್ಸಿ ಚಾಲಕರುಗಳ ಸಂಘ ಸ್ಪಷ್ಟನೆ
ಮಡಿಕೇರಿ, ಜ. ೧೪; ಕಾನೂನು ಉಲ್ಲಂಘನೆ ಮಾಡಿ, ನಿಯಮ ಮೀರಿ ಶಬರಿಮಲೆಗೆ ತೆರಳುವ ವಾಹನಗಳ ಮೇಲೆ ಮಾತ್ರ ಆರ್ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಟ್ಯಾಕ್ಸಿ ಚಾಲಕರುಗಳ ಕೊಡಗು ಜಿಲ್ಲಾ ಸಂಘ ಹೇಳಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಂ.ಜೆ.ವಿನೋದ್ ಹಾಗೂ ಉಪಾಧ್ಯಕ್ಷ ಬಿ.ಎಲ್.ತಿರುಪತಿ ಅವರುಗಳು; ಜಿಲ್ಲೆಯ ಗಡಿ ಭಾಗ ಮಾಕುಟ್ಟ ಚೆಕ್ಪೋಸ್ಟ್ನಲ್ಲಿ ಅಯ್ಯಪ್ಪ ಭಕ್ತರು ತೆರಳುವ ವಾಹನಗಳ ಮೇಲೆ ಆರ್ಟಿಒ ಅಧಿಕಾರಿಗಳು ಕಿರುಕುಳ ನೀಡುತ್ತಿರುವದಾಗಿ ವಿರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜುನಾಥ್ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ಕೆಲವು ಬಿಳಿ ಬಣ್ಣದ ಫಲಕ ಹೊಂದಿರುವ ಖಾಸಗಿ ವಾಹನಗಳು ಹಾಗೂ ಕೇರಳದಿಂದ ಬರುವ ವಾಹನಗಳಲ್ಲಿ ಸೂಕ್ತವಾದ ದಾಖಲಾತಿ, ಪ್ರಯಾಣಿಕರ ರಕ್ಷಣೆಯ ವಿಮಾ ಸೌಲಭ್ಯವಿರುವದಿಲ್ಲ. ಅಪಘಾತ ಸಂಭವಿಸಿದರೆ, ಚಾಲಕ ಹಾಗೂ ಮಾಲೀಕನಿಗೆ ಮಾತ್ರ ವಿಮಾ ಸೌಲಭ್ಯ ದೊರಕಲಿದೆ. ಆದರೆ, ಹಳದಿ ಬಣ್ಣದ ಫಲಕ ಹೊಂದಿರುವ ಬಾಡಿಗೆ ವಾಹನದಲ್ಲಿ ಎಲ್ಲ ಪ್ರಯಾಣಿಕರಿಗೂ ಸುರಕ್ಷತೆ ಇರುತ್ತದೆ, ಕೇರಳದಿಂದ ಕೊಡಗಿಗೆ ಬಂದು ಬಾಡಿಗೆ ಮಾಡುವ ವಾಹನಗಳಲ್ಲಿ ದಾಖಲಾತಿಗಳಿರುವದಿಲ್ಲ. ನಿಯಮಬಾಹಿರವಾಗಿ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವದನ್ನು ಮನಗಂಡ ಬಾಡಿಗೆ ಇಲ್ಲದೆ ಸಂಕಷ್ಟ ಎದುರರಿಸುತ್ತಿರುವ ಜಿಲ್ಲೆಯ ಟ್ಯಾಕ್ಸಿ ಚಾಲಕರ ಸಂಘಟನೆಯವರು ಆರ್ಟಿಒ ಅಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಪ್ರಯಾಣ ಬೆಳೆಸುವ ಅಯ್ಯಪ್ಪ ಭಕ್ತರು ಇಲ್ಲಿನ ಬಾಡಿಗೆ ವಾಹನವನ್ನು ಪಡೆದುಕೊಂಡು ಸುರಕ್ಷಿತವಾಗಿ ಹೋಗಿಬರುವಂತೆ ಮನವಿ ಮಾಡಿದ್ದಾರಲ್ಲದೆ, ಕಾನೂನು ಬಾಹಿರವಾಗಿ ಸಂಚರಿಸುವ ವಾಹನಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.