ಸಿದ್ದಾಪುರ, ಜ. ೧೪: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಗ್ಗುಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ನಡೆಸಲಾಯಿತು.

ಮಗ್ಗುಲ ಗ್ರಾಮದಲ್ಲಿ ಇತ್ತೀಚೆಗೆ ಕೃಷಿಕರೊಬ್ಬರ ಭತ್ತದ ಬೆಳೆಗಳನ್ನು ನಾಶಪಡಿಸಿದ ಕಾಡಾನೆಗಳು ಉಪಟಳ ನೀಡುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ೪ ಕಾಡಾನೆಗಳ ಪೈಕಿ ೩ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾದರು. ಆದರೆ ಕಾಡಾನೆಯೊಂದು ಕಾಡಿಗೆ ತೆರಳದಂತೆ ಕಾರ್ಯಾಚರಣೆ ತಂಡವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುತ್ತಾಡಿಸುತ್ತಾ ಸುಸ್ತು ಬರಿಸಿತು. ನಂತರ ಅದು ಸಮೀಪದ ಬೆಟ್ಟವನ್ನೇರಿತು. ಬೆಟ್ಟದಿಂದ ಕಾಡಾನೆಯನ್ನು ಇಳಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಶಬ್ಧ ಮಾಡಿದರೂ ಕಾಡಾನೆ ಮಾತ್ರ ಬೆಟ್ಟದಿಂದ ಇಳಿಯಲಿಲ್ಲ.

ಕಾರ್ಯಾಚರಣೆ ತಂಡವು ಸಾಕಷ್ಟು ಪ್ರಯತ್ನಪಟ್ಟರೂ ಆನೆಯೊಂದು ಬೆಟ್ಟದ ತುದಿಯಲ್ಲಿ ತಲುಪಿತು. ಆ ಭಾಗದಲ್ಲಿ ಇಳಿಜಾರು ಹಾಗೂ ಬಂಡೆಗಳು ಇರುವ ಕಾರಣ ಕಾರ್ಯಾಚರಣೆಯನ್ನು ಶನಿವಾರಕ್ಕೆ ಸ್ಥಗಿತಗೊಳಿಸಲಾಯಿತು. ವೀರಾಜಪೇಟೆ ವಿಭಾಗದ ಎ.ಸಿ.ಎಫ್ ನೆಹರೂ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ದೇಯಂಡ ಸಂಜೀತ್ ಸೋಮಯ್ಯ ಸಿಬ್ಬಂದಿಗಳಾದ ಚಂದ್ರಶೇಖರ್, ಮೋನಿಷ್, ಆನಂದ ಸೇರಿ ೨೦ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ವಾಸು ಎ.ಎನ್.