ಮಡಿಕೇರಿ, ಜ. ೧೪: ವೀರ ಸೇನಾನಿ, ಜ. ಕೊಡಂದೇರ ತಿಮ್ಮಯ್ಯ ಅವರ ಏಕೈಕ ಪುತ್ರಿ ಮಿರೇಲ್ ಚಂಗಪ್ಪ (೮೬) ಅವರು ತಾ. ೧೪ ರಂದು ಬೆಂಗಳೂರಿನಲ್ಲಿ ವಿಧಿವಶರಾದರು. ಮೇಜರ್ ಜನರಲ್ ಕೊಂಗೆಟ್ಟಿರ ಚಂಗಪ್ಪ ಅವರ ಪತ್ನಿ ಮಿರೇಲ್ ಚಂಗಪ್ಪ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನಲ್ಲೇ ನಿಧನರಾದರು. ಮೃತರು ಪತಿ ಚಂಗಪ್ಪ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಹೆಬ್ಬಾಳ್‌ನ ಚಿತಾಗಾರದಲ್ಲಿ ನೆರವೇರಿತು.
ತಿಮ್ಮಯ್ಯ ಸ್ಮಾರಕ ಭವನದಲ್ಲಿ ಶ್ರದ್ಧಾಂಜಲಿ
ಜನರಲ್ ತಿಮ್ಮಯ್ಯ ಅವರ ಪುತ್ರಿ, ಬೆಂಗಳೂರಿನಲ್ಲಿ ನಿಧನರಾದ ಮಿರೇಲ್ ಚಂಗಪ್ಪ (೮೬) ಅವರಿಗೆ ಮಡಿಕೇರಿಯಲ್ಲಿನ ತಿಮ್ಮಯ್ಯ ಸ್ಮಾರಕ ಭವನ ಸನ್ನಿಸೈಡ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಿರೇಲ್ ಚಂಗಪ್ಪ ಹುಟ್ಟಿ ಬೆಳೆದ ಸನ್ನಿಸೈಡ್‌ನ್ನು ಅನಂತರ ಮಿರೇಲ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಶಕ್ಕೊಪ್ಪಿಸಿ ತಿಮ್ಮಯ್ಯ ಸ್ಮಾರಕಭವನ ಸ್ಥಾಪನೆಗೆ ಕಾರಣರಾದರು.
ಮಿರೇಲ್ ಚಂಗಪ್ಪ ಅವರ ಭಾವಚಿತ್ರಕ್ಕೆ ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ, ನಾಯಕ್ ಸುಬೇದಾರ್ ಮೋಹನ್, ಪೊನ್ನುಕಂಡ ರಮ್ಯ ಮಾಚಯ್ಯ, ಕುಶಧರ, ಸುಭಾಷ್ ಚಂದ್ರ ಸೇರಿದಂತೆ ಸ್ಮಾರಕ ಭವನದ ಸಿಬ್ಬಂದಿಗಳು ಪುಪ್ಪಾರ್ಚನೆ ಮಾಡಿ ೧ ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಮಿರೇಲ್ ಚಂಗಪ್ಪ ಅವರ ಒತ್ತಾಸೆಯಂತೆ ಸ್ಮಾರಕ ಭವನ ನಿರ್ಮಾಣವಾಗಿದ್ದು, ಅವರ ಕುಟುಂಬ ವರ್ಗದವರ ಸಹಕಾರ ಅತ್ಯಂತ ಮಹತ್ವದ್ದಾಗಿತ್ತು ಎಂದು ಗೌಡಂಡ ತಿಮ್ಮಯ್ಯ ಸ್ಮರಿಸಿದರು.
ಶನಿವಾರ ತಿಮ್ಮಯ್ಯ ಸ್ಮಾರಕ ಭವನಕ್ಕೆ ಬಂದ ಸಂದರ್ಶಕರೂ ಮಿರೇಲ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.