ಸೋಮವಾರಪೇಟೆ, ಜ. ೧೨: ತಾಲೂಕಿನ ಕೂತಿ ಗ್ರಾಮ ಸಮೀಪದ ತಂಬಲಗೇರಿಯ ದೊಡ್ಡಗದ್ದೆ ಬಳಿ ಮೊನ್ನೆ ನಡೆದಿದ್ದ ‘ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ’ ಪ್ರಕರಣಕ್ಕೆ ಸಂಬAಧಿಸಿದAತೆ ಹಾಸನದ ಸಕಲೇಶಪುರ ಪೊಲೀಸರು ಈರ್ವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ತAಬಲಗೇರಿ ಗ್ರಾಮದ ನವೀನ್ ಅಲಿಯಾಸ್ ಪಚ್ಚಿ ಎಂಬವರನ್ನು ಕಳೆದ ತಾ. ೯ರ ರಾತ್ರಿ ತಂಬಲಗೇರಿಯ ಹೊಳೆ ಸಮೀಪ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ನಾಲ್ವರು ಸ್ನೇಹಿತರೊಂದಿಗೆ ಹೊಳೆಯಲ್ಲಿ ಮೀನು ಹಿಡಿಯಲು ತೆರಳಿದ ಸಂದರ್ಭ ಘಟನೆ ನಡೆದಿದ್ದು, ಪ್ರಾರಂಭದಲ್ಲಿ ಬೇಟೆಗಾರರ ಗುಂಡೇಟಿಗೆ ಆಕಸ್ಮಿಕವಾಗಿ ಸಿಲುಕಿರಬಹುದು ಎಂದು ಸಂಶಯಿಸಲಾಗಿತ್ತು.

ಆದರೆ ಪೊಲೀಸರ ತನಿಖೆಯಿಂದ ನಿಜಾಂಶ ಬೆಳಕಿಗೆ ಬಂದಿದ್ದು, ತಂಬಲಗೇರಿ ಗ್ರಾಮದವರೇ ಆದ ನಾಗರಾಜ್ ಅಲಿಯಾಸ್ ದುಬಾಸಿ (೬೬) ಮತ್ತು ಅನಿಲ್ (೨೯) ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ.

(ಮೊದಲ ಪುಟದಿಂದ)ಹಳೆ ದ್ವೇಷದಿಂದ ಆರೋಪಿ ನಾಗರಾಜ್, ನವೀನ್‌ನ ಟ್ರಾö್ಯಕ್ಟರ್ ಚಾಲಕನಾಗಿರುವ ಅನಿಲ್‌ಗೆ ಕಂಠಪೂರ್ತಿ ಕುಡಿಸಿ ಈ ಕೃತ್ಯ ಎಸಗಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಟ್ರಾö್ಯಕ್ಟರ್ ಚಾಲಕ ಅನಿಲ್ ಮತ್ತು ನವೀನ್ ಆಗಾಗ್ಗೆ ಬೇಟೆಗೆ ತೆರಳುತ್ತಿದ್ದರು. ಇದನ್ನೇ ಉಪಯೋಗಿಸಿಕೊಂಡ ನಾಗರಾಜ್, ಅನಿಲ್‌ಗೆ ಕುಡಿಸಿ ಆತನಿಂದಲೇ ನವೀನ್‌ಗೆ ಕರೆ ಮಾಡಿಸಿ ದೊಡ್ಡಗದ್ದೆ ಬಳಿಗೆ ಬರುವಂತೆ ಮಾಡಿದ್ದಾನೆ.

ಇದೇ ವೇಳೆ ಹೊಳೆಯಲ್ಲಿ ದಯಾನಂದ ಮತ್ತು ರಾಜು ಆಚಾರಿ ಮೀನು ಹಿಡಿಯುತ್ತಿದ್ದು, ನವೀನ್ ತನ್ನೊಂದಿಗೆ ಸ್ನೇಹಿತ ಪದ್ಮನಾಭನನ್ನು ಹೊಳೆಗೆ ಕರೆತಂದಿದ್ದಾನೆ. ಸಂಜೆ ಸಮಯದಲ್ಲಿ ನಾಲ್ವರೂ ಹೊಳೆ ಬದಿಯಲ್ಲಿದ್ದ ಸಂದರ್ಭ ಸಾಧಿಸಿದ ನಾಗರಾಜು, ತನ್ನ ಬಳಿಯಿದ್ದ ನಾಡ ಬಂದೂಕಿನಿAದ ನವೀನ್‌ಗೆ ಗುಂಡು ಹಾರಿಸಿದ್ದಾನೆ. ಘಟನೆಯಿಂದ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಯಾನಂದ ಮತ್ತು ಪದ್ಮನಾಭ ಗಾಯಗೊಂಡಿದ್ದಾರೆ.

ನAತರ ನೈಜ ಘಟನೆಯನ್ನು ಮರೆಮಾಚುವ ಉದ್ದೇಶದಿಂದ ಊರಿನ ವ್ಯಕ್ತಿಯೋರ್ವರಿಗೆ ಕರೆ ಮಾಡಿ, ಅಪರಿಚಿತರು ನವೀನ್‌ಗೆ ಗುಂಡು ಹಾರಿಸಿರುವುದಾಗಿ ತಿಳಿಸಿ, ನವೀನ್‌ನನ್ನು ಈತನೇ ಆಸ್ಪತ್ರೆಗೆ ಸಾಗಿಸಿದ್ದಾನೆ. ನಂತರ ನಾವುಗಳು ಮೀನು ಹಿಡಿಯುವಾಗ ಗುಂಡು ಹಾರಿಸಿದ್ದಾರೆ ಎಂದು ಕಥೆ ಕಟ್ಟಿದ್ದು ಮಾತ್ರವಲ್ಲದೇ, ಗ್ರಾಮದ ವ್ಯಕ್ತಿಯೋರ್ವರ ಹೆಸರನ್ನು ಉಲ್ಲೇಖಿಸಿ ಅವರನ್ನು ಬಂದೂಕಿನೊAದಿಗೆ ನೋಡಿದ್ದಾಗಿ ತಿಳಿಸುವ ಮೂಲಕ ಪ್ರಕರಣವನ್ನು ದಿಕ್ಕುತಪ್ಪಿಸುವ ಯತ್ನ ಮಾಡಿದ್ದಾನೆ.

ನಾಗರಾಜ್ ಉಲ್ಲೇಖಿಸಿದ ಹೆಸರಿನ ವ್ಯಕ್ತಿಯನ್ನು ಕರೆದು ವಿಚಾರಿಸಿದ ಸಂದರ್ಭ ಕೃತ್ಯದಲ್ಲಿ ಆತನ ಪಾತ್ರವಿಲ್ಲದಿರುವ ಬಗ್ಗೆ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಫೊರೆನ್ಸಿಕ್ ಲ್ಯಾಬ್ ತಂಡ ತೆರಳಿ ಪ್ರಾಥಮಿಕ ತನಿಖೆ ಮಾಡಿದ್ದು, ಇದು ಪೆಲೆಟ್ ಗನ್‌ನಿಂದ ಆಗಿರುವ ಕೃತ್ಯ ಎಂದು ತಿಳಿದುಬಂದ ಹಿನ್ನೆಲೆ ತನಿಖೆಯ ದಿಕ್ಕು ಬದಲಾಯಿಸಿ ನಾಗರಾಜ್ ಹಾಗೂ ಟ್ರಾö್ಯಕ್ಟರ್ ಚಾಲಕ ಅನಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ನೈಜಾಂಶ ಬೆಳಕಿಗೆ ಬಂದಿದೆ.

ಕಳೆದ ನವೆಂಬರ್ ೩೦ ರಂದು ನವೀನ್ ತನ್ನ ಟ್ರಾö್ಯಕ್ಟರ್‌ನಲ್ಲಿ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಿಸುತ್ತಿದ್ದ ಸಂದರ್ಭ ಪೊಲೀಸರು ಹಿಡಿದು ಮೊಕದ್ದಮೆ ದಾಖಲಿಸಿದ್ದರು. ಪೊಲೀಸರಿಗೆ ನಾಗರಾಜ್ ಮಾಹಿತಿ ನೀಡಿರಬಹುದು ಎಂದು ಸಂಶಯಿಸಿ ನವೀನ್ ಜಗಳ ತೆಗೆದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ದ್ವೇಷದಿಂದ ಆರೋಪಿ ನಾಗರಾಜ್ ಗುಂಡು ಹಾರಿಸಿ ಹತ್ಯೆ ಮಾಡಿರುವುದಾಗಿ ಹಾಸನ ಎಸ್.ಪಿ. ಹರಿರಾಂ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.