(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪ, ಜ. ೧೨: ಹಲವು ತಿಂಗಳ ಬಿಡುವು ನೀಡಿದ್ದ ಹುಲಿರಾಯ ಇದೀಗ ಮತ್ತೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಹಾಗೂ ಕಾಫಿ ಬೆಳೆಗಾರರಿಗೆ ನಿದ್ದೆಗೆಡಿಸಿದೆ. ತೋಟದಲ್ಲಿ ಕಾಫಿ ಕುಯ್ಲಿಗೆ ಬಂದಿದ್ದು ಸಹಜವಾಗಿಯೇ ಕಾರ್ಮಿಕರು ಹುಲಿಗಳ ಸಂಚಾರ ಅರಿತು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಕಾಫಿಯು ನೆಲಕ್ಕೆ ಉದುರಲಾರಂಭಿಸಿದ್ದು ಬೆಳೆಗಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ.

ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ದಾಳಿ ಮುಂದುವರೆಯುತ್ತಿದ್ದು ರೈತರ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಿದೆ. ಕಳೆದ ಎರಡು ತಿಂಗಳಿನಿAದ ದ. ಕೊಡಗಿನ ವಿವಿಧ ಭಾಗದಲ್ಲಿ ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆಸಿ ಕೆಲವು ದಿನಗಳ ವಿರಾಮ ನೀಡಿತ್ತು. ಇದೀಗ ಮತ್ತೆ ನಾಡಿನತ್ತ ಆಗಮಿಸಿರುವ ಹುಲಿಯು ಬಲ್ಯಮಂಡೂರು ಸಮೀಪದ ರೈತರ ಜಾನುವಾರನ್ನು ಕೊಟ್ಟಿಗೆಯಿಂದ ಎಳೆದೊಯ್ದು ತಿಂದು ಹಾಕಿದೆ. (ಮೊದಲ ಪುಟದಿಂದ) ಇದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿಗಳ ಸಂಚಾರ ಕಂಡು ಬಂದ ಹಿನ್ನೆಲೆ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದು ಘಟನೆ ನಡೆದ ಸುತ್ತಮುತ್ತಲಿನ ಸ್ಥಳದಲ್ಲಿ ಹುಲಿಯ ಚಲನ ವಲನಗಳನ್ನು ಗುರುತಿಸಲು ಹತ್ತಕ್ಕೂ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ರೈತರ ಜಾನುವಾರು ತಿಂದ ಸ್ಥಳದ ಅನತಿ ದೂರದಲ್ಲಿ ಹುಲಿಯ ಸೆರೆಗೆ ಬೋನನ್ನು ಅಳವಡಿಸಿದ್ದು ಅರಣ್ಯ ಸಿಬ್ಬಂದಿಗಳು ಕೊರೆಯುವ ಚಳಿಯ ನಡುವೆ ರಾತ್ರಿ ಪೂರ್ತಿ ಹುಲಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಹುಲಿಯು ಜಾನುವಾರು ಮೃತ ದೇಹದ ಬಳಿ ಆಗಮಿಸಿ, ಬೋನಿಟ್ಟ ಸ್ಥಳಕ್ಕೆ ಆಗಮಿಸದೆ ಅಲ್ಲಿಂದಲೇ ವಾಪಸ್ಸಾಗಿದೆ. ಈ ಭಾಗದಲ್ಲಿ ಅಳವಡಿಸಲಾದ ಕ್ಯಾಮೆರಾಗಳಿಗೆ ಹುಲಿಯ ಚಿತ್ರವೂ ಸೆರೆಯಾಗಿದೆ. ಇದರಿಂದ ಅರಣ್ಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಹುಲಿಯು ಬೋನಿನ ಬಳಿ ಬಾರದೆ ಇರುವುದು ನಿದ್ದೆಗೆಡಿಸಿದಂತಾಗಿದೆ.

ಇತ್ತ ಬಹುತೇಕ ರೈತರ ಕಾಫಿ ತೋಟದಲ್ಲಿ ಆಗಿಂದ್ದಾಗಿಯೇ ಹುಲಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಫಿ ಕುಯ್ಯಲು ತಮ್ಮ ತೋಟಗಳಿಗೆ ಕಾರ್ಮಿಕರು ಹಾಗೂ ಬೆಳೆಗಾರರು ತೆರಳುವುದು ಅನಿವಾರ್ಯವಾಗಿದೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ದ.ಕೊಡಗಿನ ವಿವಿಧ ಭಾಗದಲ್ಲಿ ರೈತರ ಕಾಫಿ ತೋಟದಲ್ಲಿ ಕೆಲವು ಹುಲಿಗಳು ಕಾಣಿಸಿಕೊಂಡಿದ್ದು ಇವುಗಳ ನಿಖರತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಲು ಇಲಾಖೆ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ರೈತರ ತೋಟ ಹಾಗೂ ಮನೆಯ ಸಮೀಪ ಕಟ್ಟಿ ಹಾಕಲಾಗುತ್ತಿರುವ, ಕೊಟ್ಟಿಗೆಯಲ್ಲಿರುವ ಜಾನುವಾರುಗಳನ್ನು ಬೇಟೆಯಾಡುತ್ತಿರುವ ಹುಲಿಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸಂಚರಿಸುತ್ತಿವೆ. ಸಮೀಪದ ಅರಣ್ಯ ವ್ಯಾಪ್ತಿಯಿಂದ ಆಗಮಿಸಿರುವ ಹುಲಿಗಳು ತನ್ನ ದಿನನಿತ್ಯದ ಆಹಾರಕ್ಕಾಗಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಎರಗುತ್ತಿವೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಕೆಲವು ಹುಲಿಗಳು ಸಂತಾನ ಅಭಿವೃದ್ಧಿಗಾಗಿ ರೈತರ ತೋಟಗಳತ್ತ ಹೆಜ್ಜೆ ಹಾಕಿದ್ದು ಈ ವೇಳೆ ತನ್ನ ಆಹಾರಕ್ಕಾಗಿ ಜಾನುವಾರುಗಳ ಮೇಲೆ ಎರಗುತ್ತಿರುವುದಾಗಿ ತಿಳಿದು ಬಂದಿದೆ. ಈ ಭಾಗದಲ್ಲಿ ಹುಲಿಗಳ ಉಪಟಳ ಹಿನ್ನೆಲೆ ಹುಲಿಯನ್ನು ಸೆರೆ ಹಿಡಿಯಲು ಹೀಗಾಗಲೇ ಇಲಾಖೆಯು ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಬೋನಿನ ಒಳಗೆ ಹುಲಿಯನ್ನು ಆಕರ್ಷಿಸಲು ಹಂದಿ ಮರಿ, ಆಡು ಮರಿಗಳನ್ನು ಕಟ್ಟಲಾಗುತ್ತಿದೆ.