ಸೋಮವಾರಪೇಟೆ, ಜ. ೬: ಭತ್ತ ಖರೀದಿಗೆ ಗೋಣಿ ಚೀಲವನ್ನು ಆರ್‌ಎಂಸಿ ಕಡ್ಡಾಯಗೊಳಿಸಿ ರುವುದರಿಂದ ಭತ್ತ ಬೆಳೆದಿರುವ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತರು ತಾವು ಬೆಳೆದ ಭತ್ತವನ್ನು ಗೋಣಿ ಚೀಲಗಳಲ್ಲಿಯೇ ತುಂಬಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಾಕಬೇಕೆಂದು ಫರ್ಮಾನು ಹೊರಡಿಸಿದ್ದಾರೆ. ಒಂದು ಗೋಣಿ ಚೀಲಕ್ಕೆ ಮಾರುಕಟ್ಟೆಯಲ್ಲಿ ೫೦ ರಿಂದ ೧೨೦ ರೂಪಾಯಿ ನೀಡಬೇಕಿದೆ. ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತರು ಕೇವಲ ಗೋಣಿ ಚೀಲಗಳಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ ಎಂದು ಗಣಗೂರು ಗ್ರಾಮದ ಕೃಷಿಕ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭತ್ತ ಬೆಳೆಯಿಂದ ರೈತರು ವಿಮುಖರಾಗುತ್ತಿರುವ ಪ್ರಸ್ತುತತೆಯಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ಆರ್‌ಎಂಸಿ, ಗೋಣಿ ಚೀಲದಲ್ಲೇ ಭತ್ತ ತುಂಬಿಸಬೇಕೆAಬ ನಿಯಮ ರೂಪಿಸಿ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
೫೦ ಕೆ.ಜಿ. ಭತ್ತವನ್ನು ಗೋಣಿ ಚೀಲದಲ್ಲಿ ತುಂಬಿಸಿ ಆರ್‌ಎಂಸಿಗೆ ಹಾಕಬೇಕಿದೆ. ಒಂದು ಗೋಣಿ ಚೀಲದ ಬೆಲೆ ೨೦ ರೂಪಾಯಿ ಇದ್ದುದು ಇದೀಗ ೫೦ ರಿಂದ ೧೨೦ ರೂಪಾಯಿಗೆ ಏರಿಕೆಯಾಗಿದೆ. ೧೦೦ ರಿಂದ ೧೫೦ ಚೀಲ ಭತ್ತ ಬೆಳೆಯುವ ರೈತರು ಗೋಣಿ ಚೀಲಕ್ಕೆ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭತ್ತವನ್ನು ಆರ್‌ಎಂಸಿಗೆ ನೀಡಿದರೆ ವಾಪಸ್ ಚೀಲವನ್ನು ರೈತರಿಗೆ ನೀಡುವುದಿಲ್ಲ. ಈ ಹಿನ್ನೆಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಭತ್ತ ತುಂಬಿಸಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ಬಗ್ಗೆ ಆರ್‌ಎಂಸಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಶಾಸಕರುಗಳು ಗಮನ ಹರಿಸಿ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಚಂದ್ರಶೇಖರ್ ಅವರು ‘ಶಕ್ತಿ’ ಮೂಲಕ ಮನವಿ ಮಾಡಿದ್ದಾರೆ.
ಈಗಾಗಲೇ ಭತ್ತ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ಕೆಲವೆಡೆ ಮುಕ್ತಾಯಗೊಂಡಿದೆ. ಮನೆಯ ಅಂಗಳ, ಕಣದಲ್ಲಿ ಭತ್ತವನ್ನು ಸಂಗ್ರಹಿಸಿ ಇಡಲಾಗಿದೆ. ಇವುಗಳನ್ನು ಆರ್‌ಎಂಸಿಗೆ ಸಾಗಿಸಲು ಚೀಲಗಳ ಕೊರತೆ ಮತ್ತು ದುಬಾರಿ ವೆಚ್ಚದ ಹೊಡೆತ ಬೀಳುತ್ತಿದೆ. ಸಾಗಾಟಕ್ಕೆ ಸಿದ್ದವಾಗಿರುವ ಭತ್ತ ಹಾಳಾಗುವ ಮೊದಲು ಗೋಣಿಚೀಲದ ನಿಯಮವನ್ನು ಕೈಬಿಡಲು ಕ್ರಮ ವಹಿಸಬೇಕೆಂದು ಹರಗ ಗ್ರಾಮದ ಪ್ರಗತಿಪರ ಕೃಷಿಕ ಶರಣ್ ಗೌಡ ಒತ್ತಾಯಿಸಿದ್ದಾರೆ.