ಕೂಡಿಗೆ, ಜ. ೬: ಕಳೆದ ಎರಡು ವರ್ಷಗಳಿಂದ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ನಷ್ಟವನ್ನು ಅನುಭವಿಸಿದರು. ಆದರೆ ಈ ಸಾಲಿನಲ್ಲಿ ಕಳೆದ ಎರಡೂ ವರ್ಷಗಳಿಗಿಂತಲೂ ಬೆಳೆಯು ಉತ್ತಮವಾಗಿದ್ದು, ರೈತರು ಖರ್ಚು ಮಾಡಿದ ಹಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರಿಂದಾಗಿ ಈ ಸಾಲಿನಲ್ಲಿ ಶುಂಠಿ ಬಿತ್ತನೆ ಮಾಡಲು ಬೇಕಾಗುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಈಗಾಗಲೇ ಭೂಮಿ ಸಿದ್ಧತೆಯಲ್ಲಿ ಜಿಲ್ಲೆಯ ರೈತರು ತೊಡಗಿದ್ದಾರೆ. ಕಳೆದ ಸಾಲಿನಲ್ಲಿ ಬಿತ್ತನೆ ಮಾಡಿದ ಶುಂಠಿ ಒಂದು ಮೂಟೆಗೆ, ಅಂದರೆ ೬೦ ಕೆ.ಜಿ.ಗೆ ರೂ. ೨೫೦೦ ಇದೆ. ಆದರೆ ಈ ಶುಂಠಿಯನ್ನು ಮಧ್ಯಮ ಶುಂಠಿ ಖರೀದಿದಾರರು ಖರೀದಿಸಿ ಹೊರ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಲಾರಿಗಳಷ್ಟು ಶುಂಠಿ ಹೊರ ರಾಜ್ಯಗಳಿಗೆ ಹೋಗಿ ಮಾರಾಟವಾಗಿದೆ. ಇದರ ಜೊತೆಯಲ್ಲಿ ಶುಂಠಿ ಬೆಳೆದ ರೈತರಿಗೆ ಸಮಾಧಾನಕರವಾದ ಬೆಲೆ ಸಿಗುತ್ತಿರುವುದರಿಂದಾಗಿ ಈ ಸಾಲಿನಲ್ಲಿಯೂ ಶುಂಠಿ ಬೆಳೆಯನ್ನು ಬೆಳೆಯಲು ಜಿಲ್ಲೆಯ ರೈತರು ಈಗಾಗಲೇ ಮುಂದಾಗಿ ಜಮೀನಿನ ಸಿದ್ಧತೆಯಲ್ಲಿ ತೊಡಗಿ, ಜಮೀನನ್ನು ಟ್ರಾö್ಯಕ್ಟರ್ ಮೂಲಕ ಉಳುಮೆ ಮಾಡಲು ಸಿದ್ಧರಾಗಿದ್ದಾರೆ. ಇದರ ಜೊತೆಯಲ್ಲಿ ಭೂಮಿಯ ಫಲವತ್ತತೆಗೆ ಅನುಕೂಲವಾಗಲು ಬೇಕಾಗುವ ರೀತಿಯಲ್ಲಿ ಸಾವಯುವ ಗೊಬ್ಬರದ ಬಳಕೆ ಮತ್ತು ಕಪ್ಪು ಮಣ್ಣುನ್ನು ಬೇರೆಡೆಯಿಂದ ತಂದು ಜಮೀನಿಗೆ ಹಾಕುವ ಕೆಲಸ ಆರಂಭವಾಗಿದೆ.
ಜಿಲ್ಲೆಯ ರೈತರು ಜಿಲ್ಲೆಯ ಹವಾಮಾನದ ಅನುಗುಣವಾಗಿ ಬೆಳೆದ ಶುಂಠಿಯನ್ನು ಈಗಾಗಲೇ ಶುಂಠಿ ಉತ್ತಮ ಬೆಲೆ ಇರುವುದರಿಂದ ಹೆಚ್ಚಿನ ರೈತರು ಮಾರಾಟ ಮಾಡಿರುತ್ತಾರೆ. ಬಯಲು ಸೀಮೆಯ ಪ್ರದೇಶದಲ್ಲಿ ಬೆಳೆದ ಶುಂಠಿ ಜಿಲ್ಲೆಯ ಮಳೆಗಾಲದ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣಗಳನ್ನು ಹೊಂದಿದೆ ಎಂದು ಕುಶಾಲನಗರ ತಾಲೂಕು ವ್ಯಾಪ್ತಿಯ ಶುಂಠಿ ಬೆಳೆಯುವ ರೈತರು ಈಗಾಗಲೇ ಬಯಲು ಪ್ರದೇಶಗಳಾದ ಕೆ.ಆರ್. ನಗರ ತಾಲೂಕು, ಹಾಸನ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬೆಳೆದಿರುವ ಬಿತ್ತನೆ ಬೀಜದ ಶುಂಠಿ ಖರೀದಿಗೆ ಮುಂದಾಗಿದ್ದಾರೆ.
ಇಷ್ಟು ವರ್ಷಗಳಲ್ಲಿ ಮಾರುಕಟ್ಟೆಯ ಮಾರಾಟದ ಶುಂಠಿ ಒಂದು ಬೆಲೆ ಆದರೆ ಬಿತ್ತನೆ ಬೀಜ ಶುಂಠಿಗೆ ಸ್ವಲ್ಪ ಹೆಚ್ಚಿನ ಬೆಲೆ ಇರುತಿತ್ತು. ಆದರೆ ಈ ಸಾಲಿನಲ್ಲಿ ಶುಂಠಿ ಬೆಳೆಯು ಉತ್ತಮವಾಗಿ ಬಂದಿರುವ ಕಾರಣದಿಂದಾಗಿ, ಅಲ್ಲದೆ ರೋಗ ಕಡಿಮೆ ಇರುವುದರಿಂದ ಬಿತ್ತನೆ ಬೀಜ ಶುಂಠಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲದೆ ಇರುವುದರಿಂದ ರೈತರು ಈ ಬಾರಿ ಹೆಚ್ಚು ಶುಂಠಿ ಬಿತ್ತನೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಶುAಠಿ ಬೆಳೆಗೆ ನೀರಾವರಿ ವ್ಯವಸ್ಥೆ ಮುಖ್ಯವಾಗಿರುತ್ತದೆ. ಇದರಿಂದಾಗಿ ರೈತರು ತಮ್ಮ ಜಮೀನಿನ ಜೊತೆಗೆ ಅಕ್ಕಪಕ್ಕದ ಗ್ರಾಮದಲ್ಲಿ ನೀರಾವರಿ ಸೌಲಭ್ಯ ಇರುವ ಜಮೀನನ್ನು ಬಾಡಿಗೆ ಆಧಾರದ ಮೇಲೆ ಪಡೆದು ಭೂಮಿಗೆ ನೀರಾವರಿ ಸೌಕರ್ಯದ ವ್ಯವಸ್ಥೆಯನ್ನು ಮಾಡಿ ಅದರ ಅನುಗುಣವಾಗಿ ಬೇಸಾಯ ಮಾಡಲು ಮತ್ತು ಈ ಸಾಲಿನಲ್ಲಿ ರೋಗ ತಡೆಗಟ್ಟಲು ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನು ಅನುಸರಿಸಿ ಮಣ್ಣಿನ ಪರೀಕ್ಷೆ ನಂತರ ಜಮೀನಿಗೆ ಸುಣ್ಣ, ಸಾವಯವ ಗೊಬ್ಬರ ಸೇರಿದಂತೆ ಮಣ್ಣಿನ ಫಲವತ್ತತೆಗೆ ಪೂರಕವಾದ ಜಮೀನಿನ ಕೆಲಸದಲ್ಲಿ ತೊಡಗಿದ್ದಾರೆ. ಕೂಡಿಗೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ, ಬಾಣವಾರ, ಸೀಗೆಹೊಸೂರು, ಬ್ಯಾಡಗೊಟ್ಟ, ಹುದುಗೂರು ಸೇರಿದಂತೆ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಅನೇಕ ಗ್ರಾಮಗಳ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.