ಸೋಮವಾರಪೇಟೆ, ಜ. ೬: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘ ಮತ್ತು ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾ.೭ರಂದು ಪಟ್ಟಣದ ಸಾಕಮ್ಮನ ಬಂಗಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ೩೬ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟವನ್ನು ಅನಿವಾರ್ಯ ಕಾರಣಗಳಿಂದ ತಾ. ೨೧ಕ್ಕೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಂದ್ಯಾಟವನ್ನು ತಾ. ೨೧ ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದೇ ೨ನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ ನಡೆಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಚಂದ್ರಮೌಳಿ ವಹಿಸಲಿದ್ದಾರೆ. ಕಬಡ್ಡಿ ಪಂದ್ಯಾಟಕ್ಕೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್ಲು ಹಾಗೂ ವಾಲಿಬಾಲ್ ಪಂದ್ಯಾಟಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎಸ್. ವೆಂಕಪ್ಪ ಚಾಲನೆ ನೀಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಹರಪಳ್ಳಿ ರವೀಂದ್ರ ವಹಿಸಲಿದ್ದಾರೆ. ಮಾಜಿ ಸಚಿವ ಬಿ.ಎ. ಜೀವಿಜಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಪಾಲ್ಗೊಳ್ಳಲಿದ್ದಾರೆ. ಹಿರಿಯ ವಕೀಲರಾದ ಈಶ್ವರಚಂದ್ರ ಸಾಗರ್, ಪ್ರಮುಖರಾದ ಕೆ.ಎಂ. ಲೋಕೇಶ್, ಗಿರೀಶ್ ಮಲ್ಲಪ್ಪ, ಅರುಣ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಕಬಡ್ಡಿಯಲ್ಲಿ ಮೊದಲ ಬಹುಮಾನ ೧೦ ಸಾವಿರ, ಎರಡನೇ ಬಹುಮಾನ ೫ ಸಾವಿರ, ತೃತೀಯ ಬಹುಮಾನ ೩ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಬೆಳಿಗ್ಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಬಡ್ಡಿ ಪಂದ್ಯಾಟವಿರುತ್ತದೆ. ನಂತರ ೨೦ ವರ್ಷದೊಳಗಿನ ಯುವಕರಿಗೆ ಪಂದ್ಯಾಟ ನಡೆಸಲಾಗುವುದು.

ವಾಲಿಬಾಲ್ ಪಂದ್ಯದ ವಿಜೇತರಿಗೆ ರೂ. ೫ ಸಾವಿರ, ದ್ವಿತೀಯ ರೂ. ೩ ಸಾವಿರ ಹಾಗೂ ತೃತೀಯ ರೂ. ೨ ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೪೪೯೭೯೧೭೯೧ ಸಂಪರ್ಕಿಸಲು ಕೋರಿದ್ದಾರೆ. ಗೋಷ್ಠಿಯಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಪದಾಧಿಕಾರಿಗಳಾದ ಪುನೀತ್, ಜೇಕಬ್ ಸೈಮನ್, ಅಜಯ್ ಇದ್ದರು.