ಮಡಿಕೇರಿ, ಜ. ೨: ತಾ. ೬ ರಿಂದ ೩ ದಿನಗಳ ಕಾಲ ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಸಾಧಕರಿಗೆ ಸನ್ಮಾನ, ಸಾಹಿತಿಗಳಿಂದ ಕವನ ವಾಚನ, ವಿಷಯ ಮಂಡನೆ ನಡೆಯಲಿದೆ.

ತಾ. ೬ ರಂದು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಪುತ್ರ, ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರನ್ನು ದೇಶ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹಾಗೂ ತಾ. ೮ ರಂದು ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೊಡಗಿನಲ್ಲಿ ಯಶಸ್ವಿಯಾಗಿ ನಡೆಸಿದ ಟಿ.ಪಿ. ರಮೇಶ್ ಅವರುಗಳನ್ನು ಸನ್ಮಾನಿಸ ಲಾಗುವುದು. ಕವಿಗೋಷ್ಠಿಯಲ್ಲಿ ಹಿರಿಯ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಕವನ ವಾಚನ ಮಾಡಲಿದ್ದಾರೆ.

ತಾ. ೭ ರಂದು ‘ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ’ ಎಂಬ ವಿಚಾರ ಗೋಷ್ಠಿಯಲ್ಲಿ ಮೂಲತಃ ಕೊಡಗಿನವರಾದ, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಡಾ. ಮಾಧವ ಪೆರಾಜೆ ಅವರು ಆಶಯ ಭಾಷಣ ಮಾಡಲಿದ್ದಾರೆ. ಕರ್ನಾಟಕ ಭಾಷಾ ವೈವಿಧ್ಯ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಕೊಡವ ಭಾಷಾ ವೈವಿಧ್ಯ ಕುರಿತು ಮಡಿಕೇರಿಯ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾವೇರಿ ಎನ್.ಎ., ಭಾಷೆ ವೈವಿಧ್ಯತೆಯ ಕುರಿತು ಜಿಲ್ಲೆಯ ಸಾಹಿತಿ ಸ್ಮಿತಾ ಅಮೃತರಾಜ್ ಉಪನ್ಯಾಸ ನೀಡಲಿದ್ದಾರೆ.

ತಾ. ೮ ರಂದು ‘ವರ್ತಮಾನದಲ್ಲಿ ಮಹಿಳೆ’ ಎಂಬ ವಿಷಯದ ಗೋಷ್ಠಿಯಲ್ಲಿ ಔದ್ಯೋಗಿಕ ಮಹಿಳೆಯರ ಸಾಧನೆಗಳು ಎಂಬ ವಿಚಾರದ ಕುರಿತು ಜಿಲ್ಲೆಯ ಉದ್ಯಮಿ ಛಾಯಾ ನಂಜಪ್ಪ ವಿಷಯ ಮಂಡಿಸಲಿದ್ದಾರೆ.

ಈ ಬಾರಿ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಏಳು ಜನರಿಗೆ ಅವಕಾಶ ದೊರೆತಿದ್ದು ಇದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ. ಕೊಡಗು ಕಸಾಪ ಅಧ್ಯಕ್ಷ ಕೇಶವ ಕಾಮತ್ ಸ್ವಾಗತ ಜವಾಬ್ದಾರಿ ನಿರ್ವಹಿಸಲಿದ್ದು, ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ ಎಂದು ಅಧ್ಯಕ್ಷ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ತಿಳಿಸಿದ್ದಾರೆ.