(ವಿಶೇಷ ವರದಿ : ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಜ. ೨: ಸ್ವಾತಂತ್ರö್ಯ ಲಭಿಸಿ ೭೫ ವರ್ಷಗಳು ಕಳೆದರೂ ಈ ನಾಡಿನ ಮೂಲ ನಿವಾಸಿಗಳಲ್ಲಿ ಒಂದಾದ ಯರವ, ಜೇನು ಕುರುಬ, ಬೆಟ್ಟ ಕುರುಬ ಸೇರಿದಂತೆ ಹಲವು ಸಮುದಾಯಗಳ ಆದಿವಾಸಿಗಳು ಇಂದಿಗೂ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಕೆಗಳಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇವರ ಅಭಿವೃದ್ಧಿಗಾಗಿ ಸರ್ಕಾರ ವಾರ್ಷಿಕವಾಗಿ ಬಜೆಟ್‌ನಲ್ಲಿ ಕೋಟ್ಯಂತರ ಹಣವನ್ನು ಮೀಸಲಿಟ್ಟು ಇವರ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ ಕೆಲವು ಸ್ಥಳೀಯ ತಾಂತ್ರಿಕ ಸಮಸ್ಯೆಗಳಿಂದಾಗಿ ಇಂದಿಗೂ ಆದಿವಾಸಿಗಳ ಮನೆ ನಿರ್ಮಾಣ ಯೋಜನೆ ಗಗನ ಕುಸುಮವಾಗಿ ಕಾಡುತ್ತಿದೆ.ಸರ್ಕಾರದ ಯೋಜನೆಯಂತೆ ಗಿರಿಜನ ಕಲ್ಯಾಣ ವತಿಯಿಂದ ಸೂರಿಲ್ಲದ ಕುಟುಂಬಕ್ಕೆ ಮನೆ ನಿರ್ಮಿಸಲು ೩.೭೫ ಲಕ್ಷ ಹಣವನ್ನು ನಿಗದಿಪಡಿಸಿದೆ.

(ಮೊದಲ ಪುಟದಿಂದ) ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಈ ಹಣವು ಇಲಾಖೆಯ ವತಿಯಿಂದ ಮಂಜೂರಾಗುತ್ತಿದೆ. ಆದರೆ ಆದಿವಾಸಿಗಳು ಲಭ್ಯವಿರುವ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯ ನಿಯಮದಂತೆ ನೀಲ ನಕ್ಷೆಯಂತೆಯೇ ಫಲಾನುಭವಿ ಮನೆ ಕಟ್ಟಬೇಕಾಗಿದೆ. ಮನೆಗೆ ಬೇಕಾದ ಇಟ್ಟಿಗೆ, ಮರಳು, ಸಿಮೆಂಟ್ ಇತ್ಯಾದಿ ವಸ್ತುಗಳನ್ನು ಫಲಾನುಭವಿಯೇ ಭರಿಸಬೇಕಾಗಿದೆ. ಹಂತ ಹಂತವಾಗಿ ಮನೆ ನಿರ್ಮಾಣವಾದ ನಂತರ ಫಲಾನುಭವಿ ಖಾತೆಗೆ ಹಣ ಜಮಾವಣೆಯಾಗುತ್ತದೆ.

ಪ್ರಮುಖವಾಗಿ ಮನೆ ನಿರ್ಮಾಣಕ್ಕೆ ಬೇಕಾದ ಮರಳು ಆದಿವಾಸಿಗಳಿಗೆ ಲಭ್ಯವಾಗುತ್ತಿಲ್ಲ. ಸಮೀಪದಲ್ಲಿರುವ ಹೊಳೆ, ತೋಡಿನ ಬದಿಯಲ್ಲಿರುವ ಮರಳನ್ನು ಉಪಯೋಗಿಸಲಾಗದ ಪರಿಸ್ಥಿತಿಯಲ್ಲಿ ಗಿರಿಜನ ಕುಟುಂಬ ಸಿಲುಕಿಕೊಂಡಿದೆ. ದ.ಕೊಡಗಿನ ಕುಟ್ಟ, ಕೆ.ಬಾಡಗ, ನಾಲ್ಕೇರಿ, ಮುಂತಾದ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಹುತೇಕ ಗಿರಿಜನರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಸರ್ಕಾರದ ವತಿಯಿಂದ ಪ್ರತಿವರ್ಷ ಗಿರಿಜನ ಹಾಗೂ ಇತರರಿಗೆ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರಾಗುತ್ತಿದೆ. ಮಂಜೂರಾಗುವ ಹಣದಲ್ಲಿ ಹೊರ ಜಿಲ್ಲೆಯಿಂದ ಮನೆ ನಿರ್ಮಾಣಕ್ಕೆ ಅತ್ಯಾವಶ್ಯವಿರುವ ಎಂಸ್ಯಾAಡ್ ಮರಳನ್ನು ತರಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಎಂಸ್ಯಾAಡ್ ಹೊರ ಜಿಲ್ಲೆಯಿಂದ ತಂದರೂ ಈ ಭಾಗಕ್ಕೆ ಮರಳು ತಲುಪುವ ವೇಳೆ ದುಪ್ಪಟ್ಟು ದರ ನೀಡಬೇಕಾಗಿದೆ. ಇದರಿಂದ ಮನೆ ನಿರ್ಮಾಣದ ಯೋಜನೆಯು ಫಲಪ್ರದವಾಗುತ್ತಿಲ್ಲ.

ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ವಾಸವಿದ್ದಾರೆ. ಬಹುತೇಕ ಕುಟುಂಬಗಳು ಇನ್ನೂ ಕೂಡ ಸ್ವಂತ ಮನೆಯನ್ನು ಹೊಂದಿಲ್ಲ. ಪ್ಲಾಸ್ಟಿಕ್ ಹೊದಿಕೆ ಹಾಗೂ ಬಿದಿರಿನ ಸಹಾಯದಿಂದಲೇ ಗುಡಿಸಲು ನಿರ್ಮಾಣ ಮಾಡಿಕೊಂಡು ದಶಕಗಳಿಂದ ಜೀವನ ದೂಡುತ್ತಿದ್ದಾರೆ. ಇಂತಹ ಕುಟುಂಬಗಳನ್ನು ಗುರುತಿಸಿದ ಸರ್ಕಾರ ಗುಣಮಟ್ಟದ ಮನೆ ನಿರ್ಮಾಣಕ್ಕೆ ಗಿರಿಜನ ಕಲ್ಯಾಣ ಇಲಾಖೆಯ ಮೂಲಕ ಒಂದು ಮನೆ ನಿರ್ಮಾಣಕ್ಕೆ ೩.೭೫ ಲಕ್ಷ ಅನುದಾನವನ್ನು ಮೀಸಲಿರಿಸಿದೆ. ಪಂಚಾಯಿತಿ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗಿದೆ. ನಾಣಚ್ಚಿ, ಗದ್ದೆಹಾಡಿ, ಬಾಳೆಕೋವು, ಚಂದನಕೆರೆ, ಕೊಡಂಗೆ ಹಾಡಿ, ಹೊಸಕೊಲ್ಲಿ, ಚೂರಿಕಾಡು ಹಾಡಿಗಳು ಕೆ.ಬಾಡಗ ಗ್ರಾ.ಪಂಚಾಯಿತಿಗಳು ಅಡಗಿವೆ. ಈ ಹಾಡಿಗಳ ನಿವಾಸಿಗಳಿಗೆ ಮನೆ ಮಂಜೂರಾಗಿದೆ. ಈ ಭಾಗದಲ್ಲಿ ಲಕ್ಷö್ಮಣತೀರ್ಥ ನದಿ ಹಾಗೂ ಹಲವು ತೋಡು, ಕಾಲುವೆಗಳಿದ್ದು, ಮರಳಿಗೆ ಕೊರತೆಯಿಲ್ಲ. ಆದರೆ ಈ ಮರಳನ್ನು ಗಿರಿಜನರು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನದಿ ಪಾತ್ರದಲ್ಲಿರುವ ಮರಳನ್ನು ಬಳಕೆ ಮಾಡಿಕೊಂಡಲ್ಲಿ ಗಿರಿಜನರು ತಮ್ಮ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.

ಮನೆಯ ಸಮೀಪವೇ ಹರಿಯುವ ಹೊಳೆ ಹಾಗೂ ತೋಡಿನಲ್ಲಿ ಮರಳಿದ್ದರೂ, ಗಿರಿಜನರು ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮರಳನ್ನು ಗಿರಿಜನರ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಜಿಲ್ಲಾಡಳಿತ ಅವಕಾಶ ನೀಡಿದ್ದಲ್ಲಿ ಇಂತಹ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಕ್ಕೆ ಬರಲಿದೆ. ಅಲ್ಲದೆ ಸರ್ಕಾರದ ಯೋಜನೆಯೊಂದಿಗೆ ಹಲವು ವರ್ಷಗಳಿಂದ ಸೂರಿಗಾಗಿ ಕಾಯುತ್ತಿದ್ದ ಆದಿವಾಸಿಗಳ ಕನಸು ಕೂಡ ನನಸು ಆಗಲಿದೆ.ಕೆ.ಬಾಡಗ ಪಂಚಾಯಿತಿಯು ಗಡಿ ಭಾಗ ಹಾಗೂ ಅರಣ್ಯದಂಚಿನಲ್ಲಿ ಇರುವುದರಿಂದ ಹೊರ ಜಿಲ್ಲೆಯಿಂದ ಎಂಸ್ಯಾAಡ್ ತಂದು ಆದಿವಾಸಿಗಳು ಮನೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಮನೆ ನಿರ್ಮಾಣ ಮಾಡುವ ಸಮೀಪದಲ್ಲಿಯೇ ನದಿಯಲ್ಲಿ ಹಾಗೂ ತೋಡಿನಲ್ಲಿ ಮರಳು ಲಭ್ಯವಿದೆ. ಗಿರಿಜನರು ತಮ್ಮ ಮನೆ ನಿರ್ಮಾಣಕ್ಕೆ ಇಲ್ಲಿಯ ಮರಳನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಅವಕಾಶವನ್ನು ನೀಡಬೇಕಾಗಿದೆ. -ಜೆ.ಬಿ.ರಮೇಶ್, ಆದಿವಾಸಿ ಮುಖಂಡ

ಕೆ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಆದಿವಾಸಿಗಳು ಹೆಚ್ಚಾಗಿ ವಾಸಿಸುತ್ತಿದ್ದಾರೆ. ೮೬ ಗಿರಿಜನ ಕುಟುಂಬಗಳಿಗೆ ತಲಾ ೩.೭೫ ಲಕ್ಷದಂತೆ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಸ್ಥಳೀಯವಾಗಿ ಸಿಗುವ ಮರಳನ್ನು ಮನೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಮನೆಯ ಯೋಜನೆ ಅನುಷ್ಠಾನವಾಗುತ್ತಿಲ್ಲ.

-ಜೆ.ಆರ್.ಚಂದ್ರ, ಅಧ್ಯಕ್ಷ, ಕೆ.ಬಾಡಗ ಗ್ರಾಮ ಪಂಚಾಯಿತಿ.

ಆದಿವಾಸಿಗಳಿಗೆ ಪ್ರತಿ ವರ್ಷ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಮಂಜೂರಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರಮುಖವಾಗಿ ಗಿರಿಜನರಿಗೆ ಸ್ಥಳೀಯವಾಗಿ ಸಿಗುವ ಮರಳನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಸಾಧ್ಯವಾಗದಿರುವುದೇ ಮನೆ ನಿರ್ಮಾಣಕ್ಕೆ ತೊಡಕಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಸ್ಥಳೀಯವಾಗಿ ಸಿಗುವ ಮರಳನ್ನು ಗಿರಿಜನರು ಬಳಕೆ ಮಾಡಿಕೊಳ್ಳಲು ಅವಕಾಶವಾಗಬೇಕು.

-ಬಿ.ಎಂ.ಅಯ್ಯಪ್ಪ, ವಕೀಲ, ಕೆ.ಬಾಡಗ ಪಂಚಾಯಿತಿ

ಅAಬೇಡ್ಕರ್, ಬಸವ ವಸತಿ ಯೋಜನೆ ಸೇರಿದಂತೆ ಎನ್‌ಆರ್‌ಇಜಿ ಮೂಲಕ ಪಂಚಾಯಿತಿಯ ಅಭಿವೃದ್ಧಿ ಕೆಲಸಗಳಿಗೆ ಸ್ಥಳೀಯವಾಗಿ ಸಿಗುವ ಮರಳು ಲಭ್ಯವಾಗದೆ ಯೋಜನೆಯ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆೆ. ಮರಳಿನ ಕೊರತೆ ಕಾಡುತ್ತಿರುವುದರಿಂದ ಯಾವುದೇ ಗುತ್ತಿಗೆದಾರ ಕೆಲಸ ನಿರ್ವಹಿಸಲು ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ಸ್ಥಳೀಯವಾಗಿ ಸಿಗುವ ಮರಳನ್ನು ಪಂಚಾಯಿತಿ ಅಭಿವೃದ್ಧಿ ಕೆಲಸಕ್ಕೆ ಗಿರಿಜನರ ಮನೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಬೇಕು. -ರಿತೇಶ್ ಬಿದ್ದಪ್ಪ, ಗ್ರಾ..ಪಂ.ಸದಸ್ಯರು

ಸ್ಥಳೀಯವಾಗಿ ಲಭ್ಯವಾಗುವ ಮರಳನ್ನು ಸರ್ಕಾರದ ಯೋಜನೆಗಳ ಸದ್ಬಳಕೆಗೆ ಉಪಯೋಗಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಮರಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾಡಳಿತ ನೀಡಬೇಕು. ಬಡವರ ಕಲ್ಯಾಣಕ್ಕಾಗಿ ಮನೆ ನಿರ್ಮಾಣ ಹಾಗೂ ಪಂಚಾಯಿತಿಯ ಅಭಿವೃದ್ಧಿ ಕೆಲಸಗಳಿಗೆ ಇದರಿಂದ ಬಾರಿ ಅನೂಕೂಲವಾಗಲಿದೆ.

-ಚೆಪ್ಪುಡಿರ ರೀಟಾ, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ, ಕೆ.ಬಾಡಗ