ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್
ನವದೆಹಲಿ, ಜ. ೨: ನೋಟುಗಳ ರದ್ದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದ್ದು, ಈ ಸಂಬAಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ೨೦೧೬ರಲ್ಲಿ ಕೇಂದ್ರ ಸರ್ಕಾರ ೫೦೦ ರೂ. ಮತ್ತು ೧೦೦೦ ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಘೋಷಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ೫೮ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ಕೇಂದ್ರದ ನೋಟ್ ಬ್ಯಾನ್ ನಿರ್ಧಾರಕ್ಕೆ ೪:೧ ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ನೋಟು ಅಮಾನ್ಯೀಕರಣ ಮಾಡಿರುವ ಕೇಂದ್ರದ ನಿರ್ಧಾರ ಸಮ್ಮತವಾಗಿದೆ. ಆರ್‌ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಾಭಿಪ್ರಾಯದ ತೀರ್ಪು ನೀಡಿ, ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತು, ಇದು ಸರ್ಕಾರದಿಂದ ಅಲ್ಲ ಎಂದು ಹೇಳಿದ್ದಾರೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಪಿ.ಚಿದಂಬರA, ನೋಟುಗಳಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ, ಸ್ವಯಂ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸುಗಳ ಅನ್ವಯ ಮಾತ್ರವೇ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ ೨೦೧೬ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಅಪನಗದೀಕರಣ ನೀತಿ ತಪ್ಪು ನಿರ್ಧಾರ ಎಂದು ವಾದಿಸಿದ್ದರು. ಮತ್ತೊಂದೆಡೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸರಿಯಲ್ಲ ಎಂದಿತ್ತು. ಜೊತೆಗೆ ಸಮಯವನ್ನು ಹಿಂದಕ್ಕೆ ಸರಿಸುವ, ಒಡೆದ ಮೊಟ್ಟೆಯನ್ನು ಮರುಜೋಡಿಸುವ ಇಂಥ ಯತ್ನಗಳಿಂದ ಯಾರಿಗೂ ಯಾವುದೇ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದಿತ್ತು. ಅಲ್ಲದೆ ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆ ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿತ್ತು.
ಸಿದ್ದೇಶ್ವರ ಶ್ರೀ ವಿಧಿವಶ
ವಿಜಯಪುರ, ಜ. ೨ : ಶತಮಾನದ ಸಂತ, ದೇಶ ಕಂಡ ೨ನೇ ವಿವೇಕಾನಂದ ಎಂದು ಖ್ಯಾತಿ ಪಡೆದಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಂಸ್ಥಾಪಕರಾಗಿದ್ದ ಸಿದ್ದೇಶ್ವರ ಶ್ರೀಗಳು ಇಂದು ವಿಧಿವಶರಾದರು. ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಶ್ರೀಗಳು ತಮಗೆ ಭಾರತ ಸರ್ಕಾರ ಘೋಷಿಸಿದ್ದ ಪದ್ಮಶ್ರೀ ಸೇರಿದಂತೆ ಹಲವು ಅತ್ಯುನ್ನತ ಪ್ರಶಸ್ತಿಗಳನ್ನು ವಿನಯಪೂರ್ವಕವಾಗಿ ನಿರಾಕರಿಸಿದ್ದರು. ಇವರ ಅಂತ್ಯಕ್ರಿಯೆ ತಾ. ೩ರಂದು (ಇಂದು) ಸಂಜೆ ೫ ಗಂಟೆಗೆ ನೆರವೇರಲಿದೆ.
ಯುವತಿಗೆ ಚಾಕು ಇರಿದು ಕೊಂದು, ತಾನೂ ಇರಿದುಕೊಂಡ ‘ಭಗ್ನ ಪ್ರೇಮಿ'
ಬೆಂಗಳೂರು, ಜ. ೨: ಪ್ರೀತಿ ವಿಚಾರಕ್ಕೆ ‘ಭಗ್ನ ಪ್ರೇಮಿ'ಯೋರ್ವ ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ೧ ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಚಾಕುವಿನೊಂದಿಗೆ ಕಾಲೇಜು ಪ್ರವೇಶಿಸಿದ ಕೋಲಾರ ಮೂಲದ ಯುವಕ ಕಾಲೇಜು ಆವರಣದಲ್ಲೇ ಯುವತಿಗೆ ಇರಿದಿದ್ದಾನೆ. ಬಳಿಕ ತಾನೂ ಕೂಡ ಚಾಕು ಇರಿದುಕೊಂಡಿದ್ದು, ಕೂಡಲೇ ಇತರೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ಈ ವೇಳೆ ಮಾರ್ಗ ಮಧ್ಯೆ ಯುವತಿ ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ಪ್ರೆಸಿಡೆನ್ಸಿ ಕಾಲೇಜಿನ ಬಿಟೆಕ್ ವಿದ್ಯಾರ್ಥಿನಿ ಲಯಸ್ಮಿತಾ ಎಂದು ಗುರುತಿಸಲಾಗಿದ್ದು, ಚಾಕು ಇರಿದ ಭಗ್ನ ಪ್ರೇಮಿಯನ್ನು ನೃಪತುಂಗ ವಿವಿ ವಿದ್ಯಾರ್ಥಿ ಪವನ್ ಕಲ್ಯಾಣ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಚಿಪುರ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಚಾಕು ಇರಿದುಕೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೂಲಗಳ ಪ್ರಕಾರ ಪ್ರೀತಿ ಪ್ರೇಮದ ವಿಚಾರಕ್ಕೆ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ತಿಳಿದುಬಂದಿದೆ. ಯುವತಿಗೆ ಇರಿದ ಯುವಕ ಕಾಲೇಜಿನ ವಿದ್ಯಾರ್ಥಿಯಲ್ಲ.. ಬದಲಿಗೆ ಹೊರಗಿನವನಾಗಿದ್ದು ನಿತ್ಯ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇಂದು ಏಕಾಏಕಿ ಚಾಕುವಿನೊಂದಿಗೆ ಕಾಲೇಜು ಪ್ರವೇಶಿಸಿದ ಯುವಕ ನೋಡ ನೋಡುತ್ತಲೇ ಯುವತಿಗೆ ಇರಿದಿದ್ದಾನೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.