ಶನಿವಾರಸಂತೆ, ಡಿ. ೨೮: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ಸ್ಟಾರ್ ಫ್ರೆಂಡ್ಸ್ ವತಿಯಿಂದ ನಡೆದ ರಾಜ್ಯಮಟ್ಟದ ಕೇರಂ ಪಂದ್ಯಾವಳಿಯ ಡಬಲ್ಸ್ ವಿಭಾಗದಲ್ಲಿ ಕುಶಾಲನಗರದ ಪ್ರಸನ್ನ ಮತ್ತು ಮಂಜುನಾಥ್ ಬೈಲುಕೊಪ್ಪ ತಂಡ ಪ್ರಥಮ ಬಹುಮಾನಗಳಿಸಿ ರೂ. ೧೫ ಸಾವಿರ ಹಾಗೂ ಟ್ರೋಫಿ ಪಡೆದರು.
ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಮೈಸೂರಿನ ಪುಟ್ಟಸ್ವಾಮಿ ಪ್ರಥಮ ಬಹುಮಾನ ರೂ. ೧೦ ಸಾವಿರ ಹಾಗೂ ಟ್ರೋಫಿ ಗಳಿಸಿದರು. ಡಬಲ್ಸ್ ವಿಭಾಗದಲ್ಲಿ ೧೮ ತಂಡಗಳು ಹಾಗೂ ಸಿಂಗಲ್ಸ್ನಲ್ಲಿ ೨೬ ಆಟಗಾರರು ಭಾಗವಹಿಸಿದ್ದರು. ಸಿಂಗಲ್ಸ್ ವಿಭಾಗದಲ್ಲಿ ಸೋಮವಾರಪೇಟೆಯ ಪ್ರದೀಪ್, ಡಬಲ್ಸ್ನಲ್ಲಿ ಬೈಲುಕೊಪ್ಪದ ರವಿ ಮತ್ತು ಮಹದೇವ್ ರನ್ನರ್ಸ್ ಟ್ರೋಫಿ ಪಡೆದರು. ಕುಶಾಲನಗರದ ಹರೀಶ್ ಭಟ್ ಮತ್ತು ಕಾಂತರಾಜ್ ಡಬಲ್ಸ್ನಲ್ಲಿ ಹಾಗೂ ವೀರಾಜಪೇಟೆಯ ರಾಜೇಶ್ ಸಿಂಗಲ್ಸ್ನಲ್ಲಿ ೩ನೇ ಸ್ಥಾನ ಪಡೆದರು.
ಕೇರಂ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್ ಗೌಡ ಮಾತನಾಡಿದರು. ಒಕ್ಕಲಿಗರ ಸಂಘದ ರಾಜ್ಯ ಕಾರ್ಯದರ್ಶಿ ಹರಪಳ್ಳಿ ರವೀಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಭಿತ್ ಗೌಡ, ಸದಸ್ಯ ಕೆ.ಆರ್. ಚಂದ್ರಶೇಖರ್, ಪಿ.ಡಿ.ಓ. ಹೂವಯ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಮಾತನಾಡಿದರು. ಪ್ರಮುಖರಾದ ಕೆ.ಎಂ. ವಹಾಬ್, ನಗೀನಾ ಬಾನು, ಜೆ.ಎಲ್. ಜನಾರ್ಧನ್ ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್. ಅನಂತಕುಮಾರ್, ಮುಷಾಯಿದ್ ರಝಾ, ಪತ್ರಕರ್ತ ಹನೀಫ್, ಇಫ್ತಿಕಾರ್ ಮತ್ತಿತರರು ಉಪಸ್ಥಿತರಿದ್ದರು.