ಮಡಿಕೇರಿ, ಡಿ. ೨೮: ಕೋಮುವಾದದ ಮೂಲಕ ಕಾರ್ಮಿಕರ ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಶ್ರಮಿಕ ವರ್ಗದ ನೈಜ ಸಮಸ್ಯೆ ಗಳನ್ನು ಮರೆ ಮಾಚಲಾ ಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಕೃಷ್ಣೇಗೌಡ ಆರೋಪಿಸಿದ್ದಾರೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿ.ಐ.ಟಿ. ಯು.) ಕೊಡಗು ಜಿಲ್ಲಾ ಸಮಿತಿಯ ೧೭ನೇ ಅಖಿಲ ಭಾರತ ಸಮ್ಮೇಳನದ ಭಾಗವಾಗಿ ನಗರದ ಪತ್ರಿಕಾ ಭವನದಲ್ಲಿ ನಡೆದ `ಜನಪರ ಚಳವಳಿಗಳು ಹಾಗೂ ಪತ್ರಿಕಾ ಮಾಧ್ಯಮಗಳು' ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಐಟಿಯು ಮಾಜಿ ಅಧ್ಯಕ್ಷ ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ಕಾರ್ಮಿಕ ವರ್ಗ ಒಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ಹಕ್ಕುಗಳನ್ನು ಪಡೆಯ ಬಹುದಾಗಿದೆ ಎಂದರು.
ಕಾರ್ಮಿಕ ಚಳವಳಿಗಳನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವ ಹುನ್ನಾರ ನಡೆಯುತ್ತಿದೆ. ಶ್ರಮಿಕ ವರ್ಗ ಸಂಘಟಿತರಾಗದಿದ್ದರೆ ಎಲ್ಲಾ ಹೋರಾಟಗಳು ವಿಫಲ ವಾಗಲಿದೆ ಎಂದು ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಮಾಜದಲ್ಲಿ ಇಂದು ಕೋಮುವಾದ ಬಲ ಗೊಳ್ಳುತ್ತಿದ್ದು, ದುಡಿಯುವ ವರ್ಗಗಳ ಚಳವಳಿ ಬಲಹೀನ ಗೊಳ್ಳುತ್ತಿದೆ. ಹೋರಾಟಗಳಲ್ಲಿ ಹಿಂದೆ ಇದ್ದ ಗಟ್ಟಿತನ ಈಗ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಬೆಲೆ ಏರಿಕೆ, ಬಂಡವಾಳಶಾಹಿ ಪರ ಆಡಳಿತ ಮತ್ತು ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಕಾರ್ಮಿಕರಿಗೆ ಉಳಿಗಾಲವಿಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂದು ಆರೋಪಿಸಿದರು.
ವಕೀಲ ಕುಂಞ ಅಬ್ದುಲ್ಲ ಮಾತನಾಡಿ, ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಮತ್ತು ಶ್ರಮಿಕ ವರ್ಗದ ಹಕ್ಕುಗಳ ಕುರಿತು ವಿವರಿಸಿದರು.
ಸಿಐಟಿಯು ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಖಜಾಂಚಿ ಎನ್.ಡಿ. ಕುಟ್ಟಪ್ಪನ್, ಸಹಕಾರ್ಯದರ್ಶಿ ಶಾಜಿ ರಮೇಶ್, ರಾಚಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.