ಸೋಮವಾರಪೇಟೆ, ಡಿ. ೨೮: ತಾಲೂಕಿನ ನೇರುಗಳಲೆ ಹಾಗೂ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದ ರಸ್ತೆ ದುಸ್ಥಿತಿಗೆ ತಲುಪಿದ್ದು, ಸರಿಪಡಿಸುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶ ಬಂದರೂ, ಸಹ ಮತ್ತೊಮ್ಮೆ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಬ್ಬೂರುಕಟ್ಟೆಯಿಂದ ಆಡಿನಾಡೂರು ಮಾರ್ಗವಾಗಿ ಹೆಬ್ಬಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆÀ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮಾಡಿ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿದೆ. ಸರಿಪಡಿಸುವಂತೆ ಗ್ರಾಮದ ನಿವಾಸಿ ಎಸ್.ಈ. ಅಣ್ಣಯ್ಯ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ರಸ್ತೆ ಸರಿಪಡಿಸುವಂತೆ ಕೊಡಗು ಜಿಲ್ಲಾ ಪಂಚಾಯಿತಿ ಕಚೇರಿಗೆ ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಬಂದಿತ್ತು. ಹಿಂದಿನ ವಾರ ಇಲಾಖೆ ಗುಂಡಿ ಮುಚ್ಚಿಸುವ ಕೆಲಸವನ್ನು ಮಾಡಿತ್ತು. ಆದರೆ, ಕಾಮಗಾರಿ ಕಳಪೆಯಾದ ಹಿನ್ನೆಲೆ ಒಂದೇ ದಿನದಲ್ಲಿ ಮತ್ತೆ ಕಿತ್ತು ಬರಲು ಪ್ರಾರಂಭಿಸಿದೆ. ಪುನಃ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ, ಪ್ರಯೋಜನವಾಗಿಲ್ಲ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡಿರುವುದರಿಂದ ರಸ್ತೆ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆಯಲ್ಲಿ ಸಾಕಷ್ಟು ಜಲ್ಲಿ ಕಲ್ಲು ತುಂಬಿದ ಬೃಹತ್ ಟಿಪ್ಪರ್‌ಗಳು ಸಂಚರಿಸುತ್ತಿರುವುದರಿAದ ಹಾಳಾಗುತ್ತಿದೆ. ರಸ್ತೆಯಲ್ಲಿ ಎಷ್ಟು ಪ್ರಮಾಣದ ತೂಕದ ಲಾರಿ ಸಂಚರಿಸಬಹುದು ಎಂದು ಇಲಾಖೆಯಿಂದ ಪ್ರಮಾಣೀಕರಿಸಬೇಕು. ನಿಯಮ ಮೀರಿದರೆ ಅಂತಹ ಲಾರಿಗಳನ್ನು ತಡೆಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಮಾಡಿರುವ ಒಂದು ಮೋರಿಯಲ್ಲಿ ಕಸಕಡ್ಡಿಗಳು ತುಂಬಿ ಸರಾಗವಾಗಿ ನೀರು ಹರಿಯುತ್ತಿಲ್ಲ. ಕೂಡಲೇ ಸಮಸ್ಯೆಗಳನ್ನು ಸರಿಪಡಿಸುವಂತೆ ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎಂ. ಶಿವದಾಸ್, ಕಾರ್ಯದರ್ಶಿ ಎ.ಎಂ. ಸುನಿಲ್, ಪಂಚಾಯಿತಿ ಸದಸ್ಯರಾದ ವಿರೂಪಾಕ್ಷ, ಹಿರಿಯರಾದ ಬಸಪ್ಪ, ಪಿ.ವಿ. ಕೃಷ್ಣಪ್ಪ ಆಗ್ರಹಿಸಿದ್ದಾರೆ.