ಕುಶಾಲನಗರ, ಡಿ. ೨೪: ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮದ ಚಂದ್ರ ಎಂಬವರ ಪತ್ನಿ ಲಕ್ಷ್ಮಿ ಎಂಬ ಮಹಿಳೆ ಚೀಟಿ ವ್ಯವಹಾರ ನಡೆಸಿ ಅಂದಾಜು ರೂ ೧.೫೦ ಕೋಟಿಯಷ್ಟು ಹಣ ನೀಡದೆ ವಂಚಿಸಿರುವ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ವಂಚನೆಗೊಳಗಾದವರ ಪರವಾಗಿ ರವಿಕುಮಾರ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಮುಳ್ಳುಸೋಗೆ ನಿವಾಸಿ ಲಕ್ಷ್ಮಿ ಆಕೆಯ ಪತಿ ಚಂದ್ರ, ಮಕ್ಕಳಾದ ರವಿ, ಅಶೋಕ, ಅಶ್ವಿನಿ, ಸಹಚರೆ ಸರಸ್ವತಿ ಎಂಬವರ ವಿರುದ್ಧ ವಂಚನೆ ದೂರು ದಾಖಲಾಗಿದೆ.
ಕಳೆದೆರೆಡು ವರ್ಷಗಳಿಂದ ವಿವಿಧ ಮೊತ್ತದ ಚೀಟಿ ವ್ಯವಹಾರ ನಡೆಸಿರುವ ಲಕ್ಷಿö್ಮ ಗ್ರಾಮದ ನೂರಾರು ಮಹಿಳೆಯರಿಗೆ ಹಣ ನೀಡದೆ ಸುಮಾರು ೧.೫೦ ಕೋಟಿಯಷ್ಟು ವಂಚನೆ ಮಾಡಲಾಗಿದೆ. ಕೇಳಲು ತೆರಳಿದರೆ ಹಲ್ಲೆಗೆ ಮುಂದಾಗುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮಗೆ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಸಂತ್ರಸ್ತರು ದೂರು ನೀಡಿದ್ದಾರೆ.
ಚೀಟಿ ಹಣ ನೀಡುವಂತೆ ಒತ್ತಾಯಿಸಿ ಮೋಸ ಹೋದವರು ಗುರುವಾರ ಸಂಜೆ ಲಕ್ಷಿö್ಮ ಮನೆಗೆ ಮುತ್ತಿಗೆ ಹಾಕಿದ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಅವರು ಸ್ಥಳೀಯ ಠಾಣಾಧಿಕಾರಿಗೆ ಸೂಚನೆ ನೀಡಿದ್ದಾರೆ.