ಸೋಮವಾರಪೇಟೆ, ಡಿ. ೨೪: ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಮಂದಿಗೆ ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ವಿತರಿಸಲಾಗುತ್ತಿದೆ. ಒಂದು ವೇಳೆ ಜಾಗ ಪರಭಾರೆಯಾದರೆ ಸರ್ಕಾರಕ್ಕೆ ವಾಪಸ್ ಪಡೆಯಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಎಚ್ಚರಿಸಿದರು.
ಕಂದಾಯ ಇಲಾಖೆಯ ಮೂಲಕ ಅಕ್ರಮ ಸಕ್ರಮ ಹಾಗೂ ೯೪ ಸಿ ಮತ್ತು ೯೪ಸಿ.ಸಿ. ಅಡಿಯಲ್ಲಿ ತಾಲೂಕಿನ ೪೭ ಮಂದಿ ಫಲಾನುಭವಿಗಳಿಗೆ ಶಾಸಕರ ಕಚೇರಿ ಆವರಣದಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದರೂ ಹಕ್ಕು ಪತ್ರ ಇಲ್ಲದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಇದನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ನಿರ್ಗತಿಕರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಹಕ್ಕುಪತ್ರ ಸಿಕ್ಕಿದ ತಕ್ಷಣ ಯಾರೂ ಸಹ ಜಾಗವನ್ನು ಮಾರಾಟ ಮಾಡಬಾರದು ಎಂದು ಕಿವಿಮಾತು ನುಡಿದ ಶಾಸಕರು, ಒಂದು ವೇಳೆ ಮಾರಾಟ ಮಾಡಿದರೆ ಸರ್ಕಾರಕ್ಕೆ ವಾಪಸ್ ಪಡೆಯಲಾಗುವುದು ಎಂದು ಎಚ್ಚರಿಸಿದರು.
ಹಕ್ಕುಪತ್ರ ಪಡೆದ ನಂತರ ಜಾಗದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಮನೆಗಳನ್ನು ಕಟ್ಟಿಕೊಟ್ಟಲು ಬ್ಯಾಂಕ್, ಸಹಕಾರ ಸಂಘಗಳಿAದ ಸಾಲ ಪಡೆಯಬಹುದು. ಆದರೆ ಯಾವುದೇ ಕಾರಣಕ್ಕೂ ಜಾಗವನ್ನು ಪರಭಾರೆ ಮಾಡಬಾರದು ಎಂದರು.
ಕೊಡಗಿನಲ್ಲಿ ಸುಮಾರು ೧೭ ಸಾವಿರ ಮಂದಿಗೆ ಇಂದಿಗೂ ಜಾಗ ಮತ್ತು ಮನೆ ಇಲ್ಲ. ಈ ಹಿನ್ನೆಲೆ ಈಗಾಗಲೇ ಜಾಗ/ಮನೆ ಹೊಂದಿರುವವರು ಮಾರಾಟ ಮಾಡಬಾರದು. ಹಕ್ಕು ಪತ್ರ ನೀಡಿರುವ ಬಗ್ಗೆ ಇಲಾಖೆಯಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳಲಾಗಿದೆ. ಒಂದು ವೇಳೆ ಈ ಜಾಗವನ್ನು ಮಾರಿ ಬೇರೆ ಜಾಗಕ್ಕೆ ಅರ್ಜಿ ಹಾಕಿದರೆ ಯಾವುದೇ ಕಾರಣಕ್ಕೂ ಜಾಗ ಲಭಿಸುವುದಿಲ್ಲ ಎಂದು ಕಿವಿಮಾತು ನುಡಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್, ಕಂದಾಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.