ಮಡಿಕೇರಿ, ಡಿ. ೨೪ : ನಗರದ ರಾಜಾಸೀಟಿನಲ್ಲಿ ಜೇನು ಉತ್ಸವ ಆರಂಭವಾಗಿದ್ದು ಜೇನಿನ ಮಹತ್ವವನ್ನು ಸಾರುವುದರೊಂದಿಗೆ ಜೇನು ಕೃಷಿಯನ್ನು ನಡೆಸುವ ಬಗ್ಗೆ ಮಾಹಿತಿ ಒದಗಿಸುತ್ತಾ ವಿವಿಧ ಪ್ರಭೇದದ ಜೇನಿನ ಸವಿಯುಣಿಸುವುದರೊಂದಿಗೆ ಜೇನು ಕೃಷಿ ಮಾಡಲು ಆಸಕ್ತಿ ಉಳ್ಳವರನ್ನು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜನೆ ಗೊಂಡಿರುವ ಜೇನು ಉತ್ಸವದಲ್ಲಿ ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆಯ ಸಂಘ ಸಂಸ್ಥೆಗಳ ಸುಮಾರು ಇಪ್ಪತ್ತು ಮಳಿಗೆಗಳಲ್ಲಿ ಜೇನು ಕೃಷಿಗೆ ಸಂಬAಧಿಸಿದ ಉಪಕರಣಗಳು, ಜೇನನ್ನು ಪ್ರದರ್ಶಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೊಡಗಿನಲ್ಲಿ ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಜೇನಿನ ಉತ್ಪಾದನೆ ಯಾಗುತಿತ್ತು. ಆದರೆ ಜೇನು ಹುಳುಗಳಲ್ಲಿ ‘ಥಾಯಿ ಸ್ಯಾಕ್ ಬ್ರೂಡ್’ ಎನ್ನುವ ಕಾಯಿಲೆ ಕಂಡು ಬಂದಲ್ಲಿAದ ಜೇನಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿಯಿತು. ಕೆಲ ವರ್ಷಗಳಿಂದೀಚೆಗೆ ನಿಧಾನವಾಗಿ ಮತ್ತೆ ಜೇನಿನ ಉತ್ಪಾದನೆ ಹೆಚ್ಚುತ್ತಿದೆಯಾದರೂ ಜೇನು ಕೃಷಿಯತ್ತ ಕೃಷಿಕರು ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ ತೋರುತಿಲ್ಲವಾದ್ದರಿಂದ ಕೃಷಿಕರಲ್ಲಿ ಜೇನು ಕೃಷಿಯ ಬಗ್ಗೆ ಆಸಕ್ತಿ ಮೂಡಿ ಸುವುದು ಜೇನು ಉತ್ಸವದ ಪ್ರಮುಖ ಉದ್ದೇಶವಾಗಿದೆ.

(ಮೊದಲ ಪುಟದಿಂದ) ಜೇನು ಉತ್ಸವದಲ್ಲಿ ಕೊಡಗಿನಲ್ಲಿ ವಿವಿಧ ಹೂಗಳು ಅರಳುವ ಸಂದರ್ಭ ಸಂಗ್ರಹಿಸಿದ ಜೇನು, ಕಾಫಿ ಹೂ ಅರಳುವ ಸಂದರ್ಭ ಸಂಗ್ರಹವಾಗುವ ಒಂದಷ್ಟು ಕಹಿ ಒಗರಿನ ಜೇನು, ಏಕರೂಪದ ಹೂ ಅರಳುವ ಸಂದರ್ಭ ಹೆಚ್.ಡಿ. ಕೋಟೆಯಲ್ಲಿ ಸಂಗ್ರಹಿತ ಅತ್ಯಂತ ಹೆಚ್ಚಿನ ಸಿಹಿ ಹೊಂದಿದ ಜೇನು ಸೇರಿದಂತೆ ಜೇನು ಕೃಷಿಯ ಆಸಕ್ತರಿಗೆ ‘ಜೇನು ಪೆಟ್ಟಿಗೆಗಳು’ ಜೇನು ಉತ್ಸವದ ಬಹುತೇಕ ಮಳಿಗೆಗಳಲ್ಲಿ ಲಭ್ಯವಿದೆ.

ಜೇನು ಪೆಟ್ಟಿಗೆಗಳಲ್ಲಿ ಕುತೂಹಲ ಮೂಡಿಸುವುದು ‘ಮುಜೆಂಟಿ ಜೇನು’ ಕೃಷಿಗೆ ಸಂಬAಧಿಸಿದ ಜೇನು ಪೆಟ್ಟಿಗೆ. ಮುಜೆಂಟಿ ಎಂದು ಕರೆಯುವ ಈ ಜೇನು ಹುಳುಗಳು ಅತ್ಯಂತ ಸಣ್ಣದಾಗಿದ್ದು, ಇವುಗಳನ್ನು ಪೆಟ್ಟಿಗೆಯಲ್ಲಿ ಕೂಡಿ ಹಾಕಿ ಜೇನು ಸಂಗ್ರಹಿಸುವುದು ಅತ್ಯಂತ ತ್ರಾಸದಾಯಕ. ಆದರೆ, ಇಂದು ಅದಕ್ಕಾಗಿಯೇ ವಿನೂತನವಾದ ಪೆಟ್ಟಿಗೆ. ಪರಿಸರದಲ್ಲಿ ನಮ್ಮ ನೋಟಕ್ಕೆ ಸಿಲುಕದ ಸಣ್ಣ ಸಣ್ಣ ಹೂಗಳಿಂದ ಮುಜೆಂಟಿ ಜೇನು ಹುಳುಗಳು ಪರಾಗವನ್ನು ಸಂಗ್ರಹಿಸುತ್ತವೆ. ಇದು ಅತ್ಯಂತ ಹೆಚ್ಚಿನ ಔಷಧೀಯ ಮೌಲ್ಯಗಳನ್ನು ಹೊಂದಿರುವ ವಿಶೇಷವಾದ ಜೇನು.

ಜೇನು ಪೆಟ್ಟಿಗೆಯೊಂದಿಗೆ ಜೇನು ಹುಳುಗಳು ಜೇನು ಸಂಗ್ರಹಿಸಿಡುವ ವ್ಯವಸ್ಥೆಯಾದ ಕೃಷಿಕ ಎರಿಗಳ ಮಾರಾಟ, ಜೇನು ಎರಿಗಳಿಂದ ಜೇನನ್ನು ತೆಗೆಯುವ ಯಂತ್ರ, ಕೈಗವಸು ಹೀಗೆ ಹಲವಾರು ಸಾಮಗ್ರಿಗಳು, ಜೇನು ಕೃಷಿಯ ಮಾಹಿತಿಗಳು ಜೇನು ಉತ್ಸವದಲ್ಲಿ ಲಭ್ಯವಿದೆ.

ಕಾಫಿ ತೋಟಗಳಲ್ಲಿ ಪೆಟ್ಟಿಗೆ ಜೇನು ಕೃಷಿ ನಡೆಸಿದಲ್ಲಿ ಫಸಲಿನ ಹೆಚ್ಚಳವಾಗುವುದು ಪ್ರಾಯೋಗಿಕವಾಗಿಯೇ ರುಜುವಾತಾಗಿದೆ. ಇದು ಕೇವಲ ಒಂದು ಫಸಲಿಗೆ ಮಾತ್ರವಲ್ಲ, ಪ್ರತಿಯೊಂದು ಕೃಷಿಯಲ್ಲೂ ಜೇನು ಹುಳುಗಳು ತಮ್ಮ ಕರಾಮತ್ತನ್ನು ತೋರಿಸಿ ಕೃಷಿಕರ ಕೈ ಹಿಡಿಯುತ್ತವೆ.

ಶುದ್ಧ ಜೇನನ್ನು ಪತ್ತೆ ಹಚ್ಚುವುದೇಗೆ?

ಮಾರುಕಟ್ಟೆಯಲ್ಲಿ ಸಿಗುವ ಜೇನು ಶುದ್ಧವೋ ಅಶುದ್ಧವೋ ಎನ್ನುವುದನ್ನು ಪತ್ತೆ ಮಾಡುವುದು ಹೇಗೆ? ಇದಕ್ಕೆ ಸರಳ ಉಪಾಯವನ್ನು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಮಳಿಗೆಯಲ್ಲಿ ಪ್ರಾಯೋಗಿಕವಾಗಿ ತೋರಿಸಲಾಗುತ್ತಿದೆ.

ಒಂದು ಟೆಸ್ಟ್ ಟ್ಯೂಬ್‌ನಲ್ಲಿ ವಿನೀಗರ್ ಹಾಕಿಕೊಳ್ಳಬೇಕು. ಅದಕ್ಕೆ ಪರೀಕ್ಷೆಗೆ ಒಳಪಡಿಸಬೇಕಾದ ಜೇನನ್ನು ಒಂದಷ್ಟು ಹಾಕಿ ಚೆನ್ನಾಗಿ ಕಲಕಬೇಕು. ಜೇನು ಶುದ್ಧವಾಗಿದ್ದರೆ ವಿನೀಗರ್‌ನೊಂದಿಗೆ ಅದು ಬೆರೆಯದೆ ಟೆಸ್ಟ್ ಟ್ಯೂಬ್‌ನ ಕೆಳಭಾಗ ನಿಲ್ಲುತ್ತದೆ. ಅಶುದ್ಧವಾಗಿದ್ದರೆ, ವಿನೀಗರ್‌ನೊಂದಿಗೆ ಬೆರೆತು, ನೀರಿನಂತೆ ಇರುವ ವಿನೀಗರ್ ಬಣ್ಣ ಬದಲಾಗುತ್ತದೆ.

ಜಿಲ್ಲಾಧಿಕಾರಿ ಭೇಟಿ

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ರಾಜಾಸೀಟಿಗೆ ಭೇಟಿ ನೀಡಿ ಉತ್ಸವವನ್ನು ಉದ್ಘಾಟಿಸಿ ಜೇನನ್ನು ಸವಿದರು. ಪ್ರವಾಸಿಗರಿಗೆ ಮಕ್ಕಳಿಗೆ ಜೇನಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಜೇನು ಕೃಷಿಕರಿಗೆ ಸಹಕಾರಿಯಾಗಲಿ ಎಂಬ ಕಾರಣಕ್ಕಾಗಿ ಜೇನು ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಕ್ಕೇರ ಪ್ರಮೋದ್, ಸಹಾಯಕ ನಿರ್ದೇಶಕ ಮುತ್ತಪ್ಪ, ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ವಸಂತ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ , ಕಾಫಿ ಬೆಳೆಗಾರ ಬೋಸ್ ಮಂದಣ್ಣ ಮತ್ತಿತರರು ಹಾಜರಿದ್ದರು.

ತಾ. ೨೫ರಂದು (ಇಂದು) ಕೂಡ ಜೇನು ಉತ್ಸವ ನಡೆಯಲಿದೆ.