ಚೆಯ್ಯಂಡಾಣೆ, ಡಿ. 22: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಡುವ ನರಿಯಂದಡ, ಕರಡ, ಅರಪಟ್ಟು, ಕೊಕೇರಿ, ಚೇಲಾವರ ಗ್ರಾಮಗಳ 2022-23ನೇ ಸಾಲಿನ ಮಹಿಳಾ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪ ಅಧ್ಯಕ್ಷತೆಯಲ್ಲಿ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು. ನೋಡಲ್ ಅಧಿಕಾರಿ ಯಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶೀಲಾ ಮಾತನಾಡಿ, ಮಹಿಳಾ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಮಹಿಳೆಯರು ಗಂಡ, ಅತ್ತೆ, ಮಾವ ಇವರಿಂದ ತೊಂದರೆ ಅನುಭವಿಸಿದಲ್ಲಿ ಅಂತವರು ತಮ್ಮ ಇಲಾಖೆಯನ್ನು ಸಂಪರ್ಕಿಸಿ ದೂರನ್ನು ಸಲ್ಲಿಸಿದರೆ ಅವರನ್ನು ಕೌನ್ಸಿಲಿಂಗ್ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದರು.

ಮಹಿಳೆಯರಿಗೆ ಉದ್ಯೋಗಿನಿ ಯೋಜನೆ, ಮಾತೃವಂದನಾ ಯೋಜನೆಯ ಬಗ್ಗೆ ನೆರದಿದ್ದವರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಕನಕಾವತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿದ್ದಪ್ಪ ಗ್ರಾಮ ಪಂಚಾಯಿತಿ ಸದಸ್ಯೆಯರು, ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯ ಕರ್ತೆಯರು, ಸ್ವಸಹಾಯ ಸಂಘದ ಸದಸ್ಯೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಸ್ವಾಗತಿಸಿ, ವಂದಿಸಿದರು.