ಗೋಣಿಕೊಪ್ಪಲು, ಡಿ. 22: ನೂರಾರು ಕುಟುಂಬವಿರುವ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಇಲ್ಲಿನ ನಿವಾಸಿಗಳು ನಿರಂತರ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ.
ಗ್ರಾಮ ಪಂಚಾಯಿತಿ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಅಡಿಯಲ್ಲಿ ಈ ಭಾಗದ ಮನೆಗಳಿಗೆ ನಲ್ಲಿಯನ್ನು ಅಳವಡಿಸಿದ್ದರೂ ಇಲ್ಲಿಯ ತನಕ ಕುಡಿಯುವ ನೀರು ಇಲ್ಲಿನ ನಿವಾಸಿಗಳಿಗೆ ತಲುಪಿಲ್ಲ.
ಲಕ್ಷಾಂತರ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿದ್ದರೂ ಇದರ ಪ್ರಯೋಜನ ಮಾತ್ರ ಇಲ್ಲಿಯ ಜನತೆಗೆ ಇನ್ನೂ ತಲುಪದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಅತೀ ಹೆಚ್ಚು ಗಿರಿಜನರನ್ನು ಹೊಂದಿರುವ ತಿತಿಮತಿ ಗ್ರಾಮ ಪಂಚಾಯಿತಿಯಲ್ಲಿ ಹತ್ತಾರು ಹಾಡಿಗಳಲ್ಲಿ ಗಿರಿಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ದಶಕಗಳಿಂದಲೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಜ್ಜಿಗೆಹಳ್ಳ ಕಾಲೋನಿಯಲ್ಲಿ 400ಕ್ಕೂ ಅಧಿಕ ಜನಸಂಖ್ಯೆಯಿದ್ದು, ನೂರಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಕುಡಿಯುವ ನೀರಿಗಾಗಿ ಈ ಭಾಗದ ಜನತೆಗೆ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಹಾಗೂ ತೆರೆದ ಬಾವಿಯನ್ನು ಈ ಹಿಂದೆ ಮಾಡಿಕೊಡಲಾಗಿತ್ತು. ಇದರಿಂದಲೇ ಈ ಭಾಗದ ಜನರು ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು.
ಕಳೆದ ಕೆಲವು ತಿಂಗಳ ಹಿಂದೆ ಈ ಭಾಗದಲ್ಲಿ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್ ಯೋಜನೆಯಡಿ ಲಕ್ಷಾಂತರ ಹಣವನ್ನು ವಿನಿಯೋಗಿಸಿ ಪ್ರತಿ ಮನೆಗೆ ನಲ್ಲಿಯನ್ನು ಅಳವಡಿಸಲು ಮುಂದಾಗಲಾಗಿತ್ತು. ಈ ವೇಳೆ ಇಲ್ಲಿನ ಆದಿವಾಸಿಗಳು ಮನೆಯ ಮುಂಭಾಗ ಕುಡಿಯುವ ನೀರಿನನಲ್ಲಿ ಬಂದ ಸಂದರ್ಭ ಸಂತೋಷಗೊಂಡಿದ್ದರು.
ತೆರೆದ ಬಾವಿ ಹಾಗೂ ಕೊಳವೆ ಬಾವಿಯಿಂದ ನೀರನ್ನು ತೆಗೆದು ಕಷ್ಟದ ದಿನಗಳನ್ನು ಕಳೆದಿದ್ದ ಇಲ್ಲಿನ ನಿವಾಸಿಗಳಿಗೆ ಇನ್ನು ಮುಂದೆ ಮನೆ ಮುಂದೆಯೇ ನೀರು ಸಿಗುತ್ತದೆ ಎಂಬ ಆಶಾ ಭಾವನೆಯಲ್ಲಿದ್ದರು. ಆದರೆ ಬಹು ನಿರೀಕ್ಷಿತ ಯೋಜನೆಯಡಿ ಕೈಗೊಂಡ ಕಾರ್ಯಕ್ರಮ ಇಲ್ಲಿ ಇನ್ನೂ ಕೂಡ ಅನುಷ್ಠಾನಗೊಂಡಿಲ್ಲ.
ಈ ಭಾಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿಯನ್ನು ಅಳವಡಿಸಿ ಟ್ಯಾಂಕ್ ನಿರ್ಮಾಣ ಮಾಡಿದ್ದರೂ ದಿನನಿತ್ಯ ಕೊಳವೆ ಬಾವಿಯಿಂದ ಟ್ಯಾಂಕ್ಗೆ ನೀರನ್ನು ಹಾಯಿಸಲು ವಿದ್ಯುತ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಮೈಸೂರು - ಕೊಡಗು ಸಂಪರ್ಕಿಸುವ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಿತಿಮತಿ ಭಾಗದ ಮಜ್ಜಿಗೆ ಹಳ್ಳ ಭಾಗದಲ್ಲಿ ವಿದ್ಯುತ್ ಕಂಬ ಅಳವಡಿಸಿ, ಟ್ರಾನ್ಸ್ ಫಾರ್ಮರ್ಗಳನ್ನು ಬಳಸಿದ್ದರೂ ಈ ಭಾಗದ ಜನತೆ ಇಂದಿಗೂ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಈ ಭಾಗದ ಬಹುತೇಕ ಮಂದಿ ಕೂಲಿ ಕೆಲಸದಲ್ಲಿ ನಿರತರಾಗಿದ್ದು ಸಂಜೆ ವೇಳೆ ತಮ್ಮ ದೈನಂದಿನ ಕೂಲಿ ಕೆಲಸವನ್ನು ಮುಗಿಸಿ ಬಂದ ನಂತರ ಮನೆಯ ಉಪಯೋಗಕ್ಕೆ ಬೇಕಾದ ನೀರನ್ನು ಕತ್ತಲೆಯಲ್ಲಿಯೇ ಸಮೀಪದ ಕೊಳವೆ ಬಾವಿ ಹಾಗೂ ತೆರೆದ ಬಾವಿಯಿಂದ ತರುವ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ಮಾಮೂಲಿಯಾಗಿದೆ.
ಕುಡಿಯುವ ನೀರಿನ ಸಮಸ್ಯೆ ಹೊತ್ತು ಪಂಚಾಯಿತಿಗೆ ತೆರಳಿ ವಿಷಯ ತಿಳಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪಂಚಾಯಿತಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗ ದಿರುವುದು ಕಂಡು ಬಂದಿದೆ. - ಹೆಚ್.ಕೆ. ಜಗದೀಶ್