ಕೂಡಿಗೆ, ಡಿ. 22: ಹಾವಿನ ವಿಷ ಕೇವಲ ಅಪಾಯಕಾರಿ ಮಾತ್ರ ಅಲ್ಲ ಅದೊಂದು ವಿಸ್ಮಯ ಕೂಡ ಎಂದು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಮತ್ತು ವಿಜ್ಞಾನಿಗಳು ಆದ ಪೆÇ್ರ. ಮಂಜುನಾಥ ಆರ್. ಕಿಣಿ ಅಭಿಪ್ರಾಯಿಸಿದರು.

ಮಂಗಳೂರು ವಿಶ್ವವಿದ್ಯಾ ನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದ ಪುಷ್ಪಗಿರಿ ಸಭಾಂಗಣ ದಲ್ಲಿ ನಡೆದ ಅಂತರ್ ರಾಷ್ಟ್ರೀಯ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿ, ಓರ್ವ ಸಂಶೋಧ ನಾರ್ಥಿ ತನ್ನ ಸಂಶೋಧನೆಯನ್ನು ಹೇಗೆ ರೂಪಿಸಬೇಕು. ಸಂಶೋಧನೆ ಯಲ್ಲಿ ಮರು ಹುಡುಕಾಟದ ಬದಲಿಗೆ ಒಂದು ನಾವಿನ್ಯತೆ ಇದ್ದರೆ ಅದರಿಂದ ಸಮಾಜಕ್ಕೆ ಅದೊಂದು ಉತ್ತಮ ಕೊಡುಗೆಯಾಗಬಲ್ಲದು. ಹಾವಿನ ವಿಷದಿಂದ ಮಿಲಿಯನ್‍ಗಟ್ಟಲೆ ಜನರು ಸತ್ತಿದ್ದರೂ ಬಿಲಿಯನ್ ಗಟ್ಟಲೇ ಜನರು ಹಲವಾರು ರೋಗಗಳಿಂದ ಗುಣಮುಕ್ತ ರಾಗಿದ್ದಾರೆ ಎಂದರು. ಹೃದಯ ಸಂಬಂಧಿ, ಮೆದುಳು ಸಂಬಂಧಿ, ಯಕೃತ್ ಸಂಬಂಧಿ, ರಕ್ತ ಹೆಪ್ಪುಗಟ್ಟು ವಂತಹ ಹಾಗೂ ಇನ್ನಿತರೆ ಕಾಯಿಲೆ ಗಳಿಗೆ ವಿಶ್ವದ ವಿಧವಿಧದ ಹಾವುಗಳ ವಿಷದಿಂದ ತಯಾರಿಸಿದ ಔಷಧ ಅಥವಾ ಅವುಗಳ ಜೀವ ತಂತುಗಳ ಸರಮಾಲೆಯನ್ನು ಉಪಯೋಗಿಸಿ ತಯಾರಿಸಿದ ಔಷಧಗಳಿಂದ ವಿಶ್ವದಾದ್ಯಂತ ಬಿಲಿಯನ್‍ಗಟ್ಟಲೇ ರೋಗಿಗಳನ್ನು ಗುಣಪಡಿಸಲಾಗಿದೆ ಹಾಗೂ ಅವುಗಳಿಂದ ಮನುಕುಲಕ್ಕೆ ವೈದ್ಯಕೀಯ ನೆಲೆಯಲ್ಲಿ ಆಗಿರುವ ಅನುಕೂಲತೆಗಳನ್ನು ಕುರಿತು ತಿಳಿಸಿದರು.

ಈ ಸಂದರ್ಭ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಡಾ. ಕೆ.ಕೆ. ಧರ್ಮಪ್ಪ ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದರು. ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಶಾಮಸುಂದರ ಜೆ., ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ. ಬಿ.ಎಸ್. ಗುಣಶ್ರೀ, ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ ಸೆಲ್‍ನ ಸಂಯೋಜಕ ರಾಜಕುಮಾರ್ ಎಸ್ ಮೇಟಿ, ಸಹಾಯಕ ಪ್ರಾಧ್ಯಾಪಕಿ ಡಾ. ಐ.ಕೆ. ಮಂಜುಳಾ, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.