ಪೆÇನ್ನಂಪೇಟೆ, ಡಿ. 22: ಬಿಟ್ಟಂಗಾಲ ಸಮೀಪದ ಕಂಡಂಗಾಲದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್ನಲ್ಲಿ ಬಲಿಷ್ಠ ಅಪ್ಪಂಡೇರಂಡ ತಂಡ ಚಾಂಪಿಯನ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಚಾಂಪಿಯನ್ ಪಟ್ಟಕ್ಕಾಗಿ ಎಷ್ಟೇ ಹೋರಾಟ ನಡೆಸಿದರೂ ಕೊಂಗಂಡ ತಂಡ ಫೈನಲ್ನಲ್ಲಿ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಕಂಡಂಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಕುತ್ತುನಾಡು ಮತ್ತು ಬೇರಳಿನಾಡು ವ್ಯಾಪ್ತಿಯ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದ ಅಪ್ಪಂಡೇರಂಡ ಮತ್ತು ಕೊಂಗಂಡ ತಂಡ ನಡೆಸಿದ ಸಮಬಲದ ಹೋರಾಟ ನೆರೆದಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು. ಇಡೀ ಪಂದ್ಯಾವಳಿಯಲ್ಲಿ ವಿಶೇಷವಾಗಿ ಗಮನ ಸೆಳೆದ, ಅಪ್ಪಂಡೇರಂಡ ತಂಡದ ಪರವಾಗಿ ಆಡಿದ ಅತಿಥಿ ಆಟಗಾರ, ಅಂತರರಾಷ್ಟ್ರೀಯ ಖ್ಯಾತಿಯ ಆಭರಣ್ ಸುದೇವ್ ಪಂದ್ಯಾವಳಿಯ 'ಅತ್ಯುತ್ತಮ ಆಟಗಾರ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಪ್ಪಂಡೇರಂಡ ತಂಡಕ್ಕೆ ದೊರೆತ ಮೊದಲ ಪೆನಾಲ್ಟಿ ಕಾರ್ನರನ್ನು ಆಭರಣ್ ಸುದೇವ್ ಗೋಲಾಗಿ ಪರಿವರ್ತಿಸಿ ತಂಡದ ಖಾತೆ ತೆರೆದರು. ಅದೇ ಸಮಯದಲ್ಲಿ ಮತ್ತೋರ್ವ ಅತಿಥಿ ಆಟಗಾರ ಕುಮಾರ್ ಮಿಂಚಿನ ಗೋಲೊಂದನ್ನು ದಾಖಲಿಸಿ ಅಪ್ಪಂಡೇರಂಡ ತಂಡದಲ್ಲಿ ಭರವಸೆ ಮೂಡಿಸಿದರು. ಕೊಂಗಂಡ ತಂಡಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕ್ ಅನ್ನು ತಂಡದ ಅತಿಥಿ ಆಟಗಾರ ವೀರಣ್ಣ ಗೋಲಾಗಿ ಪರಿವರ್ತಿಸಿ ತಂಡದ ಖಾತೆ ತೆರೆದರು. ಇದಾದ ಬಳಿಕ ಕೊಂಗಂಡ ತಂಡದ ಅತಿಥಿ ಆಟಗಾರ ಸೂರ್ಯ 23ನೇ ನಿಮಿಷದಲ್ಲಿ ಮಿಂಚಿನ ಫೀಲ್ಡ್ ಗೋಲೊಂದನ್ನು ಬಾರಿಸಿ ಅಂತರವನ್ನು ಸಮವಾಗಿಸಿದರು.
ಅಪ್ಪಂಡೇರಂಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಸಹಾಯದಿಂದ ಆಭರಣ್ ಸುದೇವ್ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಕೊಂಗಂಡ ತಂಡದ ಆಟಗಾರ ಸೂರ್ಯ 42ನೇ ನಿಮಿಷದಲ್ಲಿ ಮಿಂಚಿನ ಫೀಲ್ಡ್ ಗೋಲು ಬಾರಿಸಿ ಮತ್ತೆ ಗೋಲಿನ ಅಂತರವನ್ನು ಸಮವಾಗಿಸಿದರು. ಇದರಿಂದ ಪಂದ್ಯದ ವಿಜಯ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟ್ ಔಟ್ ಅಳವಡಿಸಿದಾಗ ಅಪ್ಪಂಡೇರಂಡ ತಂಡದ ಪರವಾಗಿ 4 ಗೋಲುಗಳು ದಾಖಲಾದರೆ, ಕೊಂಗಂಡ ತಂಡದ ಪರವಾಗಿ ಕೇವಲ ಒಂದು ಗೋಲು ಮಾತ್ರ ದಾಖಲಾಯಿತು. ಇದರಿಂದ ಅಂತಿಮವಾಗಿ ಅಪ್ಪಂಡೇರಂಡ ತಂಡ 7-4 ಗೋಲುಗಳಿಂದ ಕೊಂಗಂಡ ತಂಡವನ್ನು ಮಣಿಸಿ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿತು. ಅಪ್ಪಂಡೇರಂಡ ತಂಡದ ಪರವಾಗಿ ಆಭರಣ್ ಸುದೇವ್, ವಿನೇಶ್, ಕುಮಾರ್ ಮತ್ತು ಭರತ್
(ಮೊದಲ ಪುಟದಿಂದ) ಶೂಟ್ ಔಟ್ ನಲ್ಲಿ ಗೋಲು ಹೊಡೆದರೆ ಕೊಂಗಂಡ ತಂಡದ ಪರವಾಗಿ ಸೂರ್ಯ ಏಕ ಮಾತ್ರ ಗೋಲು ಗಳಿಸುವಲ್ಲಿ ಶಕ್ತರಾದರು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಂಗಂಡ ತಂಡವು ಚಂದೂರ ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಪಂದ್ಯಾವಳಿಯ 'ಅತ್ಯುತ್ತಮ ಗೋಲ್ ಕೀಪರ್' ಪ್ರಶಸ್ತಿಯನ್ನು ಮೇಚಿಯಂಡ ತಂಡದ ವೇಣು ಪಡೆದುಕೊಂಡರೆ, ಫೈನಲ್ ಪಂದ್ಯಾವಳಿಯ 'ಅತ್ಯುತ್ತಮ ಆಟಗಾರ' ಪ್ರಶಸ್ತಿಯನ್ನು ಕೊಂಗಂಡ ತಂಡದ ವೀರಣ್ಣ ಪಡೆದುಕೊಂಡರು.
ಕೌಟುಂಬಿಕ ಹಾಕಿ ಫೈನಲ್ ಪಂದ್ಯಾವಳಿಯ ಅಂಗವಾಗಿ ಸಾರ್ವಜನಿಕರಿಗಾಗಿ ನಡೆದ 0.22 ರೈಫಲ್ಸ್ ನಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ರುದ್ರಗುಪ್ಪೆಯ ಚಂದೂರ ರಾಜ ಪ್ರಥಮ, ಕೋಕೇರಿಯ ಚೇನಂಡ ಬೋಪಣ್ಣ ದ್ವಿತೀಯ ಮತ್ತು ಚೆಟ್ಟಳ್ಳಿಯ ಪುತ್ತರಿರ ನಂಜಪ್ಪ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಫೈನಲ್ಸ್ ಪಂದ್ಯಾವಳಿಯನ್ನು ಕಂಡಂಗಾಲದ ಹಿರಿಯರಾದ ಮೂಕಚಂಡ ಬೋಪಯ್ಯ ಉದ್ಘಾಟಿಸಿದರು. ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಮುಲ್ಲೆಂಗಡ ಸಿ. ಅಶೋಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾದ ಮುಲ್ಲೇಂಗಡ ಶಂಕರಿ ಪೆÇನ್ನಪ್ಪ, ಅಮ್ಮತ್ತಿಯ ಡಾ. ಚಂದೂರ ಬಿದ್ದಪ್ಪ, ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರಾದ ಬಿ.ಶೆಟ್ಟಿಗೇರಿಯ ನಾಮೆರ ಬಿ. ನವೀನ್ ಮೊದಲಾದವರು ಭಾಗವಹಿಸಿದ್ದರು.
ಪಂದ್ಯಾವಳಿಯ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ, ಕ್ರೀಡಾ ಸಮಿತಿಯ ಪ್ರಮುಖರಾದ ಮುಲ್ಲೇಂಗಡ ನಟ್ಟು ನಾಚಪ್ಪ, ಮೇಚಿಯಂಡ ಅಪ್ಪುಟ ಮೊದಲಾದವರು ಉಪಸ್ಥಿತರಿದ್ದರು. ಮಾಳೇಟಿರ ಶ್ರೀನಿವಾಸ್ ಅವರು ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ನೀಡಿದರು.
ಪಂದ್ಯಾವಳಿಯ ತೀರ್ಪುಗಾರರಾಗಿ ಬುಟ್ಟಿಯಂಡ ಚಂಗಪ್ಪ, ಕೋಡಿಮಣಿಯಂಡ ಗಣಪತಿ, ಚಂದಪ್ಪಂಡ ಆಕಾಶ್, ನೆಲ್ಲಮಕ್ಕಡ ಪವನ್, ಕೊಕ್ಕಂಡ ರೋಶನ್, ಸುಳ್ಳಿಮಾಡ ಸುಬ್ಬಯ್ಯ, ಸಣ್ಣುವಂಡ ಲೋಕೇಶ್, ಚೋಯಮಾಡಂಡ ಚಂಗಪ್ಪ, ಅಂಜಪರವಂಡ ಕುಶಾಲಪ್ಪ, ಮೂಕಚಂಡ ನಾಚಪ್ಪ, ಮೇಚಿಯಂಡ ಕೀರ್ತಿ ಅವರು ಕಾರ್ಯನಿರ್ವಹಿಸಿದರು.
ಹಾಕಿ ಪಂದ್ಯಾವಳಿಯ ಎಲ್ಲಾ ಪಾರಿತೋಷಕಗಳನ್ನು ರುದ್ರಗುಪ್ಪೆಯ ದಿ. ಮುಲ್ಲೇಂಗಡ ಚೊಂದಮ್ಮ ಸ್ಮರಣಾರ್ಥ ಅವರ ಪತಿ ಮುಲ್ಲೇಂಗಡ ಶಂಕರಿ ಪೆÇನ್ನಪ್ಪ ಪ್ರಾಯೋಜಿಸಿದ್ದರೆ, ವಿನ್ನರ್ಸ್ ತಂಡದ ನಗದು ಬಹುಮಾನವನ್ನು ದಿ. ಚಂದುರ ಕಮಲಾ ಸ್ಮರಣಾರ್ಥವಾಗಿ ಅವರ ಪತಿ ಅಮ್ಮತಿಯ ಚಂದೂರ ಬಿದ್ದಪ್ಪ, ರನ್ನರ್ಸ್ ತಂಡದ ನಗದು ವಾಲ್ನೂರಿನ ದಿ. ಬಲ್ಲಡಿಚಂಡ ಕೆ.ಕಾರ್ಯಪ್ಪ ಸ್ಮರಣಾರ್ಥ ಅವರ ಪತ್ನಿ ಚೋಂದಮ್ಮ ಹಾಗೂ ತೃತೀಯ ಸ್ಥಾನದ ನಗದು ಬಹುಮಾನವನ್ನು ಬೆಂಗಳೂರಿನ ದಿ. ಕೋಣೇರಿರ ವಾಣಿ ಗಣಪತಿ ಸ್ಮರಣಾರ್ಥ ಅವರ ಪತಿ ಕೋಣೇರಿರ ಗಣಪತಿ ಪ್ರಾಯೋಜಿಸಿದ್ದರು.
ಪಂದ್ಯಾವಳಿಯ ಸಮಾರೋಪದ ಅಂಗವಾಗಿ ನಡೆದ 0.22 ರೈಫಲ್ಸ್ ನಿಂದ ತೆಂಗಿನಕಾಯಿಗೆ ಗಂಡು ಹೊಡೆಯುವ ಪ್ರಥಮ ಸ್ಥಾನದ ಬಹುಮಾನವನ್ನು ಮೂರ್ನಾಡಿನ ನುಚ್ಚಿಮಣಿಯಂಡ ಸ್ವಾತಿ ಅಯ್ಯಪ್ಪ, ದ್ವಿತೀಯ ಸ್ಥಾನದ ಬಹುಮಾನವನ್ನು ಮೈಸೂರಿನ ದಿ. ಮುಲ್ಲೇಂಗಡ ಪ್ರಕಾಶ್ ಸ್ಮರಣಾರ್ಥವಾಗಿ ಅವರ ಪತ್ನಿ ಅನಿತಾ ಪ್ರಕಾಶ್ ಮತ್ತು ಮಗ ಸಚಿನ್ ಸೋಮಣ್ಣ ಮತ್ತು ತೃತೀಯ ಸ್ಥಾನದ ಬಹುಮಾನವನ್ನು ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರಾದ ಬಿ.ಶೆಟ್ಟಿಗೇರಿಯ ನಾಮೆರ ಬಿ. ನವೀನ್ ಅವರು ಪ್ರಾಯೋಜಿಸಿದ್ದರು.
- ಚಿತ್ರ ವರದಿ: ರಫೀಕ್ ತೂಚಮಕೇರಿ