ಕಣಿವೆ, ಡಿ. 22: ಪುರಸಭೆಯ ಅಧೀನಕ್ಕೆ ಒಳಪಟ್ಟ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ಸಂತಸ ಒಂದೆಡೆಯಾದರೆ, ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಆಡಳಿತ ಸಿಬ್ಬಂದಿಗಳಲ್ಲಿ ಒಂದು ತರಹದ ನೋವು, ನಿರಾಸೆಯ ನೀರವ ಮೌನ ಆವರಿಸಿದೆ. ಸಾರ್ವಜನಿಕ ಕೆಲಸ ಕಾರ್ಯಗಳ ನಿಮಿತ್ತ ನಿತ್ಯವೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಪಂಚಾಯಿತಿ ಆವರಣದಲ್ಲಿ ಗುರುವಾರ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.

ಕಚೇರಿಯ ಒಳಗೆ ತೆರಳಿ ನೋಡಿದರೆ ಅಲ್ಲಿ ಇಂಟರ್‍ನೆಟ್ ಸಂಪರ್ಕ ಕಡಿತಗೊಂಡಿತ್ತು. ಕಚೇರಿಯಲ್ಲಿದ್ದ ಸಿಬ್ಬಂದಿಗಳ ಕಣ್ಣಾಲಿಗಳು ತೇವಗೊಂಡಂತೆ ಗೋಚರಿಸುತ್ತಿತ್ತು. ಕಚೇರಿಯ ಕೆಲಸಗಳು ಸ್ತಬ್ಧಗೊಂಡಿವೆ. ಕೇವಲ ಕಂದಾಯವನ್ನಷ್ಟೇ ಕಟ್ಟಿಸಿ ಕೊಳ್ಳಲಾಗುತ್ತಿದೆ. ಉಳಿದಂತೆ ಯಾವುದೇ ಸೌಲಭ್ಯಗಳಿಗೆ ಕಂಪ್ಯೂಟರ್‍ಗಳು ತಮ್ಮ ಕೆಲಸಗಳನ್ನು ನಿಲ್ಲಿಸಿವೆ.

ಪುರಸಭೆಯಾಗಿ ಕುಶಾಲನಗರ ಎಂಬ ಕಡತಕ್ಕೆ ಡಿಸೆಂಬರ್ 8 ರಂದು ರಾಜ್ಯಪಾಲರು ಸಹಿ ಹಾಕಿದೊಡನೆಯೇ ಪಂಚಾಯಿತಿಯ 23 ಮಂದಿ ಸದಸ್ಯರ ಸದಸ್ಯತ್ವ ರದ್ದಾಗಿದೆ.

(ಮೊದಲ ಪುಟದಿಂದ) ಅಧ್ಯಕ್ಷರಿಗೆ ಮಾತ್ರ ಕೇವಲ 15 ದಿನಗಳ ಕಾಲ ಪಂಚಾಯಿತಿಯ ಕೆಲವೊಂದು ಕಡತಗಳಿಗೆ ಸಹಿ ಮಾಡುವ ಅಧಿಕಾರ ವಿಸ್ತರಿಸಿದ್ದರಿಂದ ತಾ. 23ಕ್ಕೆ ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಅವರ ಅಧಿಕಾರ ಕೊನೆಗೊಳ್ಳಲಿದೆ.

ಸಂಕಷ್ಟದಲ್ಲಿ ಚುನಾಯಿತರು

ಕಳೆದ ಎರಡು ವರ್ಷಗಳ ಹಿಂದೆ ನಡೆದ ಸಾರ್ವಜನಿಕ ಚುನಾವಣೆಯಲ್ಲಿ ಲಕ್ಷ ಲಕ್ಷಗಳ ಹಣವನ್ನು ಸಾಲ ಸೋಲ ಮಾಡಿ ಚುನಾವಣೆಗೆ ವ್ಯಯಿಸಿ ಚುನಾಯಿತರಾಗಿ ಬಂದಿದ್ದ ಬಹುತೇಕ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲವು ಸದಸ್ಯರು ತಮ್ಮ ಮಡದಿ ಮಕ್ಕಳ ಚಿನ್ನಾಭರಣಗಳನ್ನು ಬ್ಯಾಂಕುಗಳಲ್ಲಿ ಗಿರವಿ ಇಟ್ಟು ತಂದ ಹಣವನ್ನು ವ್ಯಯಿಸಿ ಚುನಾಯಿತರಾಗಿದ್ದರು ಎನ್ನಲಾಗಿದೆ.

ಅಯ್ಯೋ ಅವಧಿ ಪೂರ್ಣವಾಗುವ ತನಕ ಐದು ವರ್ಷಗಳು ಅಧಿಕಾರದಲ್ಲಿದ್ದರೆ ಖರ್ಚು ಮಾಡಿದ ಹಣವನ್ನು ಹೇಗೋ ಸಂಪಾದಿಸಬಹುದಿತ್ತು. ಎಲ್ಲವನ್ನು ಪುರಸಭೆ ಕಸಿದುಕೊಂಡಿತಲ್ಲ ಎಂದು ಕೆಲವರು ವ್ಯವಸ್ಥೆಗೆ ಹಿಡಿ ಶಾಪ ಹಾಕಿದ್ದು ಉಂಟು.

ನಮ್ಮಂತೆ ಅವರದ್ದು ಹೋಗಲಿ

ಕುಶಾಲನಗರ ಪುರಸಭೆಗಾಗಿ ನಾವು ನಮ್ಮ ಅಧಿಕಾರವನ್ನು ಕಳೆದುಕೊಂಡೆವಲ್ಲ. ಅದೇ ರೀತಿ ಕುಶಾಲನಗರ ಪಟ್ಟಣ ಪಂಚಾಯಿತಿಯ ಸದಸ್ಯತನವು ಹೋಗಲಿ. ಅವರಿಗೊಂದು ನ್ಯಾಯ. ನಮಗೊಂದು ನ್ಯಾಯನಾ ಎಂದು ಕೆಲವು ನೊಂದ ಸದಸ್ಯರು ‘ಶಕ್ತಿ’ಯೊಂದಿಗೆ ತಮ್ಮ ಸಂಕಟವನ್ನು ಬಿಚ್ಚಿಟ್ಟರು. ಪಂಚಾಯಿತಿಯಲ್ಲಿ 23 ಮಂದಿ ಚುನಾಯಿತ ಜನಪ್ರತಿನಿಧಿಗಳಿದ್ದಾರೆ. ಪೌರ ಕಾರ್ಮಿಕರು, ಕಚೇರಿ ಸಿಬ್ಬಂದಿಗಳು, ವಾಟರ್‍ಮೆನ್, ಎಲೆಕ್ಟ್ರಿಷಿಯನ್‍ಗಳು ಒಳಗೊಂಡು ಪಂಚಾಯಿತಿಯಲ್ಲಿ 19 ಮಂದಿ ನೌಕರರಿದ್ದಾರೆ. ಇವರೆಲ್ಲರು ಅವರ ಸೇವಾ ಜೇಷ್ಠತೆಯ ಆಧಾರದಲ್ಲಿ ಪುರಸಭೆಯ ಅಧೀನಕ್ಕೊಳಪಡಬೇಕಿದೆ. ಇನ್ನು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ತಾಲೂಕು ಪಂಚಾಯಿತಿಯಲ್ಲಿ ಮುಂದುವರೆಯಲಿದ್ದಾರೆ.

ತಾಲೂಕು ಪಂಚಾಯಿತಿಯಾಗಲಿದೆಯೇ..?

ಕಳೆದ 30 ವರ್ಷಗಳಿಗೂ ಹೆಚ್ಚು ಅವಧಿ ಗ್ರಾಮ ಪಂಚಾಯಿತಿಯಾಗಿದ್ದ ಮುಳ್ಳುಸೋಗೆ ಕಚೇರಿಯ ಪ್ರಾಂಗಣ ಕುಶಾಲನಗರ ತಾಲೂಕು ಪಂಚಾಯಿತಿ ಕಚೇರಿಯಾಗಲಿದೆಯೇ ? ಎಂಬ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉತ್ತರ ನೀಡಬೇಕಿದೆ.

ಏಕೆಂದರೆ ಕುಶಾಲನಗರ ಹೊಸದಾಗಿ ತಾಲೂಕು ಕೇಂದ್ರವಾದ್ದರಿಂದ ತಹಶೀಲ್ದಾರ್ ಕಾರ್ಯಾಲಯದ ಮಾದರಿಯಲ್ಲಿ ತಾಲೂಕು ಪಂಚಾಯಿತಿ ಕಚೇರಿಯು ಕಾರ್ಯವನ್ನು ಆರಂಭಿಸಬೇಕಿರುವ ಕಾರಣ ಕುಶಾಲನಗರ ಪಟ್ಟಣದೊಳಗೆ ಸೂಕ್ತ ಸ್ಥಳಾವಕಾಶ ಅಥವಾ ಕಟ್ಟಡವೂ ಇಲ್ಲದ ಕಾರಣ ಈ ಪಂಚಾಯಿತಿ ಕಾರ್ಯಾಲಯವನ್ನೇ ತಾಲೂಕು ಪಂಚಾಯಿತಿಯಾಗಿ ಮಾರ್ಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಪುರಸಭೆಯನ್ನು ಸ್ಥಳಾಂತರಿಸಲಿ

ಈಗಾಗಲೇ ಕುಶಾಲನಗರ ಪುರಸಭೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಹೇಗಿದ್ದರೂ ವಿಶಾಲವಾದ ಕಾರ್ಯಾಲಯ ಹಾಗೂ ಸಭಾಂಗಣವಿದೆ. ಸಾರ್ವಜನಿಕರು ಬಂದು ಹೋಗಲು ಅನುಕೂಲವಾಗುವ ಕಾರಣ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಕುಶಾಲನಗರ ಪುರಸಭೆ ಕಚೇರಿಯನ್ನು ಸ್ಥಳಾಂತರಿಸಲಿ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ರಾಜೇಶ್ ಹಾಗೂ ಮಾಜಿ ಸದಸ್ಯ ಪ್ರಸನ್ನ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪಂಚಾಯಿತಿ ಉದ್ಯಾನ ಕಳೆಗುಂದದಿರಲಿ

ಮುಳ್ಳುಸೋಗೆ ಗ್ರಾಪಂ ಆವರಣದಲ್ಲಿ ಪಿಡಿಓ ಸುಮೇಶ್ ಅವರ ಆಸಕ್ತಿಯಿಂದಾಗಿ ಅಂದ ಚೆಂದವಾಗಿ ನಿರ್ಮಾಣವಾಗಿದ್ದ ಉದ್ಯಾನದ ಹಸಿರು ಬಾಡದಂತೆ ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ ಇನ್ನು ಮುಂದೆ ಕುಶಾಲನಗರ ಪುರಸಭೆಯ ಅಧಿಕಾರಿಗಳದ್ದು. ಉದ್ಯಾನದೊಳಗಿನ ತಾಯಿ ಕಾವೇರಿಯ ಕೈಯಿಂದ ಜುಳು ಜುಳು ಸುರಿವ ಕಾವೇರಿ ನೀರು ಸದಾ ಹರಿಯುವ ಹಾಗೆ ಜಾಗೃತೆ ವಹಿಸಬೇಕಾಗಿದೆ.

ಸಾರ್ವಜನಿಕರಿಗೆ ಸಂತಸ

ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿ ಪುರಸಭೆಗೆ ಒಳಪಟ್ಟದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರಲ್ಲಿ ಸಂತಸ ಮನೆ ಮಾಡಿದೆ. ಸುಸಜ್ಜಿತ ರಸ್ತೆ - ಚರಂಡಿ ನಿರ್ಮಾಣಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಮುಳ್ಳುಸೋಗೆ ಗಾ.್ರಪಂ.ಗೆ ಸೀಮಿತ ಅನುದಾನವಿದ್ದ ಕಾರಣ ಸೌಲಭ್ಯಗಳು ಮಂದ ಗತಿಯಲ್ಲಿದ್ದವು. ಆದರೆ ಪುರಸಭೆಗೆ ವಾರ್ಷಿಕ ಕೋಟಿ ಕೋಟಿ ರೂಗಳ ಅನುದಾನಗಳು ಬರುವ ಹಿನ್ನೆಲೆಯಲ್ಲಿ ಸೌಲಭ್ಯಗಳು ಮನೆ ಬಾಗಿಲಿಗೆ ಹರಿದು ಬರಲಿವೆ ಎಂಬ ವಿಶ್ವಾಸದಲ್ಲಿ ಜನರಿದ್ದಾರೆ.

( ವಿಶೇಷ ವರದಿ : ಕೆ.ಎಸ್.ಮೂರ್ತಿ )