ಮಡಿಕೇರಿ, ಡಿ. 22: ಮದೆನಾಡು ಗ್ರಾಮದಲ್ಲಿ ಕಡಿದ ಮರಗಳನ್ನು ಸಾಗಾಟ ಮಾಡುವ ಸಂಬಂಧ ಅರಣ್ಯ ಇಲಾಖೆಯಿಂದ ನೀಡಲಾಗುವ ರಹದಾರಿಯನ್ನು ದುರ್ಬಳಕೆ ಮಾಡಿಕೊಂಡು ಕೇರಳಕ್ಕೆ ಅಧಿಕ ಮರ ಸಾಗಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಉಪ ವಲಯ ಅರಣ್ಯಾಧಿಕಾರಿಯ ಎರಡು ವಾರ್ಷಿಕ ವೇತನ ಕಡಿತ ಮಾಡುವದರೊಂದಿಗೆ ಇಲಾಖಾ ವಿಚಾರಣೆ ನಡೆಸಿ ಅಮಾನತ್ತು ಕೂಡ ಮಾಡಲಾಗಿದೆ.

ಮದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿ.ಎಲ್. ಹರೀಶ್, ಬದ್ರಿನಾರಾಯಣ್ ಚೌದ್ರಿ ಹಾಗೂ ಹುಲಿಮನೆ ಗಣಪತಿ ಎಂಬವರ ಜಾಗಗಳಲ್ಲಿ ಮರಗಳನ್ನು ಕಡಿದು ಸಾಗಾಟ ಮಾಡುವ ಸಂಬಂಧ ಅರಣ್ಯ ಇಲಾಖೆಯಿಂದ ಅನುಮತಿ ರಹದಾರಿಗಾಗಿ ಕೋರಲಾಗಿತ್ತು. ಆ ಸಮಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ರಾಘವ ಅವರು ರಹದಾರಿ ಪತ್ರವನ್ನು ನೀಡಿದ್ದರು. ಆದರೆ ರಹದಾರಿಯಲ್ಲಿ ನಮೂದಾಗಿರುವ ಮರಗಳ ಸಂಖ್ಯೆ ಹಾಗೂ ಕೇರಳಕ್ಕೆ ಸಾಗಾಟವಾಗಿರುವ (ಮೊದಲ ಪುಟದಿಂದ) ಮರಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬಂದುದರಿಂದ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖಾ ವತಿಯಿಂದ ತನಿಖೆಗೆ ಆದೇಶ ಮಾಡಲಾಗಿತ್ತು.

ಅರಣ್ಯ ಸಂಚಾರಿ ದಳದ ವರದಿ

ಪ್ರಕರಣದ ಬಗ್ಗೆ ಜಾಗ ಹಾಗೂ ಕಡತಗಳನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಅರಣ್ಯ ಸಂಚಾರಿ ದಳ(ಜಾಗೃತ) ಇವರಿಗೆ ವಹಿಸಲಾಗಿತ್ತು. ಅದರಂತೆ ಪರಿಶೀಲನೆ ಮಾಡಿದ ಸಂಚಾರಿ ದಳದ ಉಪ ಸಂರಕ್ಷಣಾಧಿಕಾರಿ ರೋಶನಿ ಅವರು ಸುಮಾರು 21 ಪುಟಗಳ ವರದಿಯನ್ನು ಆಗಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿದ್ದರು. ಮರ ಸಾಗಾಟ ಮಾಡಲಾಗಿರುವ ರಹದಾರಿಗಳ ಪೈಕಿ ಒಟ್ಟು ಐದು ರಹದಾರಿಗಳನ್ನು ತಿದ್ದುಪಡಿ ಮಾಡಿರುವದಾಗಿ ಆರೋಪಿಸಿ ವರದಿ ಸಲ್ಲಿಸಲಾಗಿತ್ತು. ರಹದಾರಿಯ ಮೂಲ ಪ್ರತಿಗಳಲ್ಲಿ ದಿನಾಂಕ, ಮರದ ದಿಮ್ಮಿಗಳ ಸಂಖ್ಯೆ ಒಂದು ರೀತಿಯದ್ದಾಗಿದ್ದರೆ, ಎರಡನೇ ಪ್ರತಿಯಲ್ಲಿ ವ್ಯತ್ಯಾಸಗಳು ಇರುವದನ್ನು ನಮೂದಿಸಲಾಗಿದೆ. ಅಲ್ಲದೆ, ಒಂದೇ ಮರದ ದಿಮ್ಮಿಯ ಅಳತೆಯನ್ನು ಬೇರೆ ಬೇರೆ ರಹದಾರಿಗಳಲ್ಲಿ ಮತ್ತೆ ಮತ್ತೆ ಬರೆದಿರುವದನ್ನು ಪತ್ತೆ ಮಾಡಿರುವದಾಗಿ ವರದಿ ಸಲ್ಲಿಸಲಾಗಿತ್ತು.

ಅಧಿಕಾರಿ ಪರವಾಗಿ ವರದಿ

ರೋಶನಿ ಅವರು ಸಲ್ಲಿಸಿದ್ದ ವರದಿಯ ಪರಿಶೀಲನೆಗಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಪಾಷ ಅವರನ್ನು ಇಲಾಖೆ ನೇಮಕ ಮಾಡಿತ್ತು. ವರದಿ ಹಾಗೂ ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿ ಎಲ್ಲವೂ ಸರಿಯಾಗಿದೆ ಎಂದು ವರದಿ ಸಲ್ಲಿಸಿದ್ದರು. ಅಲ್ಲಿಗೆ ಪ್ರಕರಣ ಮುಚ್ಚಿ ಹೋಗಿತ್ತು. ಆದರೆ, ಪ್ರಕರಣವನ್ನು ತಿರುಚಲಾಗಿದೆ ಎಂದು ಮತ್ತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತೆ ತನಿಖೆ ಆರಂಭಿಸಲಾಯಿತು.

ಆರೋಪ ರುಜುವಾತು

ಮತ್ತೆ ದೂರುಗಳು ಬಂದ ಹಿನ್ನೆಲೆಯಲ್ಲಿ ವೀರಾಜಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮಡಿಕೇರಿ ವಲಯ ಅರಣ್ಯಾಧಿಕಾರಿಗಳನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಯಿತು. ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ ಅಧಿಕಾರಿಗಳು ಒಟ್ಟು ಐದು ರಹದಾರಿಗಳ ಪೈಕಿ ಮೂರು ರಹದಾರಿಗಳನ್ನು ತಿದ್ದುಪಡಿ ಮಾಡಿರುವದು ರುಜುವಾತಾಗಿರುವದಾಗಿ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಯನ್ನು ಅಮಾನತ್ತುಗೊಳಿಸಿ, ಎರಡು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತ ತಡೆ ಹಿಡಿದು ಆದೇಶ ಹೊರಡಿಸಿತ್ತು.

ನ್ಯಾಯಮಂಡಳಿ ತಡೆ

ಅರಣ್ಯ ಇಲಾಖೆಯ ಕ್ರಮದ ತೀರ್ಪನ್ನು ಪ್ರಶ್ನಿಸಿ ರಾಘವ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ 20-03-2020ರಂದು ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿತ್ತು. ಅಲ್ಲದೆ, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಸೂಚನೆ ನೀಡಿತ್ತು. ಅದರಂತೆ ಪ್ರಕರಣದ ಬಗ್ಗೆ ಮರು ವಿಚಾರಣೆ ಕೂಡ ನಡೆಯಿತು.ಶಿಕ್ಷೆಯಾಗಿದೆ..!

ಶಿಕ್ಷೆಯಾಗಿರುವ ಆದೇಶದ ಪ್ರತಿಯನ್ನು ಸ್ವತಃ ರಾಘವ ಅವರೇ ನೀಡಿದ್ದು, ಈಗಾಗಲೇ ಕಳೆದ ಆರು ವರ್ಷಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಿರುಕುಳ ಅನುಭವಿಸುವಂತಾಗಿದೆ. ತಾನು ಬೇಕೆಂದು ತಪ್ಪು ಮಾಡಿಲ್ಲ., ರಹದಾರಿಯ ದಾಖಲೆಗಳನ್ನು ತಾನು ತಿದ್ದುಪಡಿ ಮಾಡಿಲ್ಲ. ಮರ ಸಾಗಾಟ ವೇಳೆ ಮಳೆಯಿಂದಾಗಿ ಲಾರಿಗಳು ಮುಂದೆ ಸಾಗದ ಹಿನ್ನೆಲೆಯಲ್ಲಿ ಮರದ ದಿಮ್ಮಿಗಳನ್ನು ಕೆಲಗಿಳಿಸಿ ಮತ್ತೆ ಮರುದಿನ ಲಾರಿಗೆ ತುಂಬಿಸಿದ್ದರಿಂದ ಲೆಕ್ಕ ಹಾಗೂ ದಿನಾಂಕಗಳಲ್ಲಿ ವ್ಯತ್ಯಾಸವಾಗಿದೆ. ಮೂರು ರಹದಾರಿಗಳಲ್ಲಿ ಸಣ್ಣ ತಪ್ಪಾಗಿದೆ. ಅದನ್ನು ಬೇಕಂತ ಮಾಡಿಲ್ಲ. ಆದರೂ ತನಿಖೆ ವೇಳೆ ತಪ್ಪೊಪ್ಪಿಕೊಂಡಿರುವದರಿಂದ ತನ್ನ ವೇತನ ಬಡ್ತಿಗೆ ತಡೆ ಹಿಡಿದು, ಅಮಾನತ್ತು ಮಾಡಿ ಶಿಕ್ಷೆ ಅನುಭವಿಸಿಯಾಗಿದೆ. ತನ್ನ ಕರ್ತವ್ಯ ವೇಳೆ ಅಕ್ರಮ ಮರ ಸಾಗಾಟಕ್ಕೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ವಿನಾಕಾರಣ ದೂರು ನೀಡುತ್ತಿದ್ದಾರೆ. ರಹದಾರಿಯ ಕಡತಗಳನ್ನು ಬೇರೆ ಯಾರೋ ತಿದ್ದುಪಡಿ ಮಾಡಿ ಸುಟ್ಟು ಹಾಕಿದ್ದಾರೆ. ಇದೆಲ್ಲವೂ ಕೆಲವರ ಕುತಂತ್ರವಾಗಿದೆ ಎಂದು ರಾಘವ ಸ್ಪಷ್ಟೀಕರಣ ನೀಡಿದ್ದಾರೆ.

ತೀರ್ಪು ಎತ್ತಿ ಹಿಡಿದ ಇಲಾಖೆ

ನ್ಯಾಯ ಮಂಡಳಿಯ ಸೂಚನೆಯಂತೆ ವಿಚಾರಣಾಧಿಕಾರಿಯಾಗಿ ನೇಮಕಗೊಂಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ರಹದಾರಿಯ 1ರಿಂದ 5ರವರೆಗಿನ ಆರೋಪಗಳ ಪೈಕಿ 1 ಹಾಗೂ 2ನೇ ಆರೋಪಗಳ ಬಗ್ಗೆ ಸಾಬೀತುಪಡಿಸಲು ಸೂಕ್ತ ಸಾಕ್ಷಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿದ್ದು, ಕ್ರಮ ಸಂಖ್ಯೆ 3ರಿಂದ 5ರವರೆಗಿನ ಆರೋಪಗಳು ವಿಚಾರಣಾ ಸಮಯದಲ್ಲಿ ಸಾಬೀತಾಗಿರುವದಾಗಿ ವರದಿ ಸಲ್ಲಿಸಿದ್ದಾರೆ. ಅಂತಿಮ ವಿಚಾರಣಾ ವರದಿಯಂತೆ ರಾಘವ ಅವರು ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾಗಿ ಕರ್ತವ್ಯ ಸಲ್ಲಿಸಿದ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷ್ಯತೆ, ಉದಾಸೀನತೆ, ಬೇಜವಾಬ್ದಾರಿತನ, ಅಕ್ರಮ ಮರಕಡಿತಲೆಗೆ ರಹದಾರಿ ವಿತರಣೆಗೆ ನೇರ - ಪರೋಕ್ಷ ಸಹಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದುರುಪಯೋಗದ ಆರೋಪವು ಸಾಬೀತಾಗಿರುವದು ಕಂಡುಬಂದಿದೆ. ಹಾಗಾಗಿ ರಾಘವ ಆವರು ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಹೊರಿಸಲಾದ ಆರೋಪವು ಸಾಕ್ಷಾಧಾರಗಳಿಂದ ರುಜುವಾತುಗೊಂಡಿರುವದರಿಂದ ನೌಕರನಿಗೆ ‘ವಾಗ್ದಂಡನೆ’ ವಿಧಿಸಿ ಕರ್ನಾಟಕ ನಾಗರಿಕ ಸೇವಾ ಕರ್ನಾಟಕ ಸರಕಾರಿ ಸೇವಾ( ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 8(3)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಉಲ್ಲೇಖ(4)ರ ಆದೇಶದಲ್ಲಿ ನೀಡಿದ ದಂಡನೆಯನ್ನೇ ಅಂತಿಮ ದಂಡನೆಯಾಗಿ ಪರಿಗಣಿಸಿ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಅವರು ದಿನಾಂಕ 09-09-2022ರಂದು ಆದೇಶ ಹೊರಡಿಸಿದ್ದಾರೆ. ಅಂದರೆ, ಅಮಾನತ್ತು ಹಾಗೂ ವೇತನ ಬಡ್ತಿ ಕಡಿತದ ಶಿಕ್ಷೆಯನ್ನೇ ಎತ್ತಿ ಹಿಡಿಯಲಾಗಿದೆ.

?ಕುಡೆಕಲ್ ಸಂತೋಷ್