ಲಿಂಗಾಯತ ಪಂಚಮಸಾಲಿ ವಿರಾಟ್ ಪಂಚಶಕ್ತಿ ಸಮಾವೇಶ

ಬೆಳಗಾವಿ, ಡಿ. 22: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ವಿರಾಟ್ ಪಂಚಶಕ್ತಿ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಭಾರೀ ಪ್ರಮಾಣದ ಜನರು ಭಾಗವಹಿಸಿದ್ದರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶ್ಯಪ್ಪನವರ, ಎ.ಬಿ. ಪಾಟೀಲ ಸೇರಿದಂತೆ ಹಲವು ಮುಖಂಡರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಮಾವೇಶಕ್ಕಾಗಿ ಸುವರ್ಣ ವಿಧಾನಸೌಧದಿಂದ 5 ಕಿ.ಮೀ. ದೂರದ ಬಸ್ತವಾಡ- ಕಮಕಾರಟ್ಟಿ ಮಧ್ಯದಲ್ಲಿ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಮತ್ತೊಂದೆಡೆ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

ಗಡಿ ವಿವಾದ-ಖಂಡನಾ ನಿರ್ಣಯ ಅಂಗೀಕಾರ

ಬೆಳಗಾವಿ, ಡಿ. 22: ಮಹಾರಾಷ್ಟ್ರದ ಗಡಿ ವಿವಾದ ಖಂಡಿಸಿ ರಾಜ್ಯ ವಿಧಾನಸಭೆಯಲ್ಲಿ ಇಂದು ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಖಂಡನಾ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಯಿತು. ನಂತರ ಮಾತನಾಡಿದ ಮುಖ್ಯಮಂತ್ರಿ, ಕರ್ನಾಟಕದ ನೆಲ, ಜಲದ ಹಿತ ಕಾಪಾಡಲು ಮತ್ತು ಕಾನೂನಿನ ಹೋರಾಟದ ಸಮರ್ಥನೆ ಮಾಡಲು, ಈ ಮೂಲಕ ರಾಜ್ಯ ಸರ್ಕಾರ ತನ್ನ ಬದ್ದತೆಯನ್ನು ಪ್ರದರ್ಶಿಸಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ ಎಂದರು.

ಕೊರೊನಾ ವೈರಸ್ ಭೀತಿ - ಅಗತ್ಯ ಸಿದ್ಧತೆ

ನವದೆಹಲಿ, ಡಿ. 22: ದೇಶದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್ ಭೀತಿ ಎದುರಾಗಿದೆ. ಇದಕ್ಕಾಗಿ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ಸಿದ್ಧತೆ ನಡೆ ಸುತ್ತಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರ ಕಣ್ಗಾವಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೊರೊನಾ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದರು. ದೇಶದಲ್ಲಿ ಹೊಸ ಕೊರೊನಾ ಪ್ರಕರಣ ಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಆದರೆ ಈ ಮಧ್ಯೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಜನರು ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಸಲು ಪ್ರಾರಂಭಿಸಬೇಕು ಎಂದು ಮಾಂಡವಿಯಾ ಹೇಳಿದ್ದಾರೆ. ಅಲ್ಲದೆ ಸಂಸತ್ತಿನಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಹಾಜರಾದರು.

ನಡುದಾರಿಯಲ್ಲಿ ಯುವತಿಯ ಹತ್ಯೆ

ದಾವಣಗೆರೆ, ಡಿ. 22: ದಾವಣೆಗೆರೆಯಲ್ಲಿ ಹಾಡುಗಲೇ ಯುವತಿಗೆ ಮನಬಂದಂತೆ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ದಾವಣಗೆರೆ ನಗರದ ಬಿಜೆ ಬಡಾವಣೆಯಲ್ಲಿ ಬುರ್ಖಾ ಧರಿಸಿ ಕೆಲಸಕ್ಕೆ ತೆರಳುತ್ತಿದ್ದ ಮುಸ್ಲಿಂ ಯುವತಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ ವ್ಯಕ್ತಿಯೋರ್ವ ಆಕೆಗೆ ಮನಬಂದಂತೆ ಚಾಕುವಿನಿಂದ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಯುವತಿ ಕೂಗಾಡಿದ್ದಾಳೆ. ಇದನ್ನು ಲೆಕ್ಕಿಸದ ಆರೋಪಿ ಆಕೆ ಸಾಯುವವರೆಗೂ ಹಲ್ಲೆ ನಡೆಸಿದ್ದಾನೆ. ಕೊಲೆಗೆ ಪ್ರೇಮ ನಿರಾಕರಣೆ ಕಾರಣ ಎನ್ನಲಾಗಿದೆ. ಮೃತ ಯುವತಿ ವಿನೋಭ ನಗರದ ನಿವಾಸಿ 28 ವರ್ಷದ ಚಾಂದ್ ಸುಲ್ತಾನಾ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೆ ಮೃತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಕೆರಳಿದ ಪಾಗಲ್ ಪ್ರೇಮಿ ಚಾಂದ್ ಫೀರ್ ಆಕೆಯನ್ನು ನಡುರಸ್ತೆಯಲ್ಲೇ ಕೊಂದು ಹಾಕಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಚಾಂದ್ ಫೀರ್ ವಿಷ ಸೇವಿಸಿದ್ದು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಕುರಿತು ಚರ್ಚೆ

ಬೆಳಗಾವಿ, ಡಿ. 22: ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೀಸಲಾತಿಗೆ ಆಗ್ರಹಿಸಿ ಅನೇಕ ಸಮುದಾಯಗಳು ಹೋರಾಟ ಮಾಡುತ್ತಿವೆ. ಅದೇ ರೀತಿ ಒಕ್ಕಲಿಗರು ಕೂಡ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕಂದಾಯ ಸಚಿವರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಬರ್ತ್‍ಡೇ ಆಚರಣೆಗೆ ಸುವರ್ಣಸೌಧ ಬಾಡಿಗೆಗೆ ನೀಡಿ

ಬೆಳಗಾವಿ, ಡಿ. 22: ಮಗಳ ಬರ್ತ್‍ಡೇ ಆಚರಣೆಗೆ ಸುವರ್ಣ ಸೌಧವನ್ನು ಬಾಡಿಗೆಗೆ ನೀಡುವಂತೆ ವಿಧಾನ ಪರಿಷತ್ ಸಭಾಪತಿಗೆ ವಕೀಲರೊಬ್ಬರು ಮನವಿ ಪತ್ರ ಸಲ್ಲಿಸಿರುವ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ವಕೀಲ ಮಲ್ಲಿಕಾರ್ಜುನ ಚೌಕಾಶಿ ಹೆಸರಿನ ವ್ಯಕ್ತಿ ಸುವರ್ಣ ಸೌಧ ಬಾಡಿಗೆಗೆ ನೀಡುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧ ವರ್ಷದಲ್ಲಿ 15 ದಿನ ಮಾತ್ರ ಕಾರ್ಯನಿರ್ವಹಿಸುತ್ತದೆ. ಉಳಿದ ದಿನ ಕಾಲಿ ಇರುತ್ತದೆ. ಇದರಿಂದ ಶುಭ ಕಾರ್ಯಗಳಿಗೆ ಬಾಡಿಗೆ ಕೊಟ್ಟರೆ ಒಳ್ಳೆಯದು. ಖರ್ಚು ಸರಿ ಹೊಂದಿಸಲು ಬಾಡಿಗೆ ಕೊಟ್ಟರೆ ಒಳ್ಳೆಯದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಂಸದನ ರೂ. 55 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

ಕೊಯಮತ್ತೂರು, ಡಿ. 22: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಡಿಎಂಕೆ ಸಂಸದ ಎ. ರಾಜಾ ಅವರಿಗೆ ಸೇರಿದ 55 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ತಿಳಿಸಿದೆ. 2004 ರಿಂದ 2007 ರ ವರೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಗುರುಗ್ರಾಮ್ ಮೂಲದ ರಿಯಲ್ ಎಸ್ಟೇಟ್ ಕಂಪೆನಿಗೆ ಪರಿಸರ ಅನುಮತಿ ನೀಡಲು ರಾಜಾ ಅವ ರೊಂದಿಗೆ ಸಂಬಂಧ ಹೊಂದಿರುವ ಕಂಪೆನಿ ಈ ಭೂಮಿ ಖರೀದಿಸಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಭೂಮಿ ರಾಜಾ ಅವರ ಬೇನಾಮಿ ಕಂಪೆನಿ ಹೆಸರಿನಲ್ಲಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಚೀನಾ ಗಡಿ ಉದ್ವಿಗ್ನತೆ ಚರ್ಚೆಗೆ ನಕಾರ - ವಿಪಕ್ಷಗಳ ಆಕ್ಷೇಪ

ನವದೆಹಲಿ, ಡಿ. 22: ಸದನದಲ್ಲಿ ಚೀನಾ ಗಡಿ ಉದ್ವಿಗ್ನತೆ ಕುರಿತಂತೆ ಚರ್ಚೆಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳು ಗುರುವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿದವು. ಈ ಹಿಂದೆ ಅಧಿವೇಶನದ ವೇಳೆ ಬಿಜೆಪಿಯ ಸಭಾನಾಯಕ ಪಿಯೂಷ್ ಗೋಯಲ್ ಅವರು ಬಿಹಾರದ ಬಗ್ಗೆ ಮಾಡಿದ್ದ ಕೆಲವು ಟೀಕೆಗಳಿಗೆ ಅವರು ಆಕ್ಷೇಪ ಎತ್ತಿದರು. ಬೆಳಗ್ಗಿನ ಅಧಿವೇಶನದಲ್ಲಿ (ಶೂನ್ಯ ವೇಳೆ) ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ತೊಡಗಿದವು. ಸದನದ ಬಾವಿಗೆ ಇಳಿದು, ಚೀನಾದೊಂದಿಗಿನ ಗಡಿ ಸಂಘರ್ಷದ ವಿಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಮತ್ತು ಗೋಯಲ್ ಅವರ ಹೇಳಿಕೆಯು ಬಿಹಾರಕ್ಕೆ ‘ಅವಮಾನ' ಎಂದು ಆರೋಪಿಸಿದರು.

ಚೀನಾದ ಮೇಲೆ ಭಾರತ ಕಣ್ಣು

ನವದೆಹಲಿ, ಡಿ. 22: ಚೀನಾದಲ್ಲಿ ದಿಢೀರ್ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆ ರಾಷ್ಟ್ರದ ಪರಿಸ್ಥಿತಿ ಮೇಲೆ ಭಾರತ ಕಣ್ಣಿಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಇತರ ರಾಷ್ಟ್ರಗಳಿಗೆ ಯಾವಾಗಲೂ ಔಷಧಗಳ ನೆರವು ನೀಡುತ್ತಾ ಬಂದಿದ್ದೇವೆ. ಪ್ರಯಾಣ ಮಾರ್ಗಸೂಚಿಯನ್ನು ಇನ್ನೂ ಹೊರಡಿಸಿಲ್ಲ. ಆದರೆ, ಜನರು ತಾವು ವಾಸಿಸುತ್ತಿರುವ ಕಡೆಗಳಲ್ಲಿ ದೇಶದಲ್ಲಿನ ಸ್ಥಳೀಯ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು. ಸಿಎಎ ವರದಿ ಪ್ರಕಾರ ಇತ್ತೀಚಿಗೆ ಚೀನಾದಲ್ಲಿ ಕೋವಿಡ್‍ನಿಂದ ಸುಮಾರು 1 ಮಿಲಿಯನ್‍ನಷ್ಟು ಜನರು ಸಾವನ್ನಪ್ಪಿದ್ದಾರೆ. ಈ ತಿಂಗಳು ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಚೀನಾದಲ್ಲಿನ ಪ್ರಮುಖ ನಗರಗಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿದೆ.