ಮಡಿಕೇರಿ, ಡಿ. 22: ಮಡಿಕೇರಿ ನಗರಸಭೆಯಲ್ಲಿನ ಕಡತಗಳ ಪರಿಶೀಲನೆ ಸಂದರ್ಭ ಪೀಠೋಪಕರಣಗಳ ಖರೀದಿ ವಿಚಾರದಲ್ಲಿ ದುಬಾರಿ ಮೊತ್ತದ ಖರೀದಿಯನ್ನು ಟೆಂಡರ್ ಕರೆಯದೆ ಕೇವಲ ಕೊಟೇಷನ್ ಹೆಸರಿನಲ್ಲಿ ನಡೆಸಿರುವ ವಿಚಾರ ತಿಳಿದು ಬಂದಿದೆ.

ಈ ಬಗ್ಗೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ ಅವರು ದೂರು ನೀಡಿರುವುದು ಪತ್ರಿಕೆಗೆ ವರದಿಯಾಗಿದೆ. ಕಳೆದ 8.7.2022ರಲ್ಲಿಯೇ ಈ ಬಗ್ಗೆ ಹಿಂದಿನ ಪೌರಾಯುಕ್ತ ರಾಮದಾಸ್ ವಿರುದ್ಧ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ಇವರಿಗೆ ದೂರು ನೀಡಲಾಗಿದೆ. ಸುಮಾರು ರೂ. 5.20 ಲಕ್ಷದ ಪೀಠೋಪಕರಣಗಳನ್ನು ಒಂದೇ ದಿನಾಂಕದಲ್ಲಿ ಕೊಟೇಷನ್ ಮೂಲಕ ದುಬಾರಿ ಬೆಲೆಗೆ ಖರೀದಿಸಿರುವುದು ಹಾಗೂ ಜಮಾಬಂದಿ ಪುಸ್ತಕ ಆರ್.ಸಿ. ಪುಸ್ತಕ ಹಾಗೂ ನಗರಸಭೆ ದಾಖಲೆ ಪುಸ್ತಕಗಳನ್ನು ಡಾಟಾ ಎಂಟ್ರಿ, ಸ್ಕ್ಯಾನಿಂಗ್‍ಗಳನ್ನು ಯಾವುದೇ ಟೆಂಡರ್ ಕರೆಯದೆ ಕೊಟೇಷನ್ ಮೂಲಕ

(ಮೊದಲ ಪುಟದಿಂದ) ಸುಮಾರು 12 ರಿಂದ 15 ಲಕ್ಷ ಮೊತ್ತವನ್ನು ಪತ್ರಿಕೆಗಳಲ್ಲಿ ಜಾಹೀರಾತು ಹಾಕದೇ ತಮಗೆ ಬೇಕಾದವರಿಗೆ ದುಬಾರಿ ಬೆಲೆಯಲ್ಲಿ ಮಾಡಿಸಿರುವುದು ಕಂಡುಬಂದಿರುತ್ತದೆ. ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ನಗರಸಭೆಯ ಪೌರಾಯುಕ್ತರಾಗಿದ್ದ ರಾಮದಾಸ್ ಅವರು ಅಧಿಕಾರಿಗಳಿಗೆ ಒತ್ತಡವೇರಿ ಕೆಲಸ ಮಾಡಿಸಿರುವುದಾಗಿ ಆರೋಪವಿದೆ.

ಇದಲ್ಲದೆ ನಗರಸಭೆಯ ವಿದ್ಯುತ್ ಕಾಮಗಾರಿ, ಕುಡಿಯುವ ನೀರಿಗೆ ಸಂಬಂಧಪಟ್ಟ ಕೆಲಸಗಳನ್ನು ಕೂಡ ಕೊಟೇಷನ್ ಮೂಲಕವೇ ಮಾಡಿರುವುದರಿಂದ ಕಡತಗಳನ್ನು ಪರಿಶೀಲಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷರು ಪತ್ರದಲ್ಲಿ ಕೋರಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ದಾಖಲಾತಿಗಳೊಂದಿಗೆ ಯೋಜನಾ ನಿರ್ದೇಶಕರ ಕಚೇರಿಗೆ ಖುದ್ದು ಹಾಜರಾಗಿ ವರದಿ ಸಲ್ಲಿಸಲು ಪೌರಾಯುಕ್ತರಿಗೆ ತಾ. 12.8.2022ರಲ್ಲಿ ಸೂಚಿಸಲಾಗಿತ್ತು.

ಆದರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಯಾವುದೇ ಮಾಹಿತಿ ಹಾಗೂ ದಾಖಲಾತಿಗಳನ್ನು ಹಾಜರುಪಡಿಸದ ಕಾರಣದಿಂದ 2.9.2022ರಲ್ಲಿ ಮತ್ತೊಂದು ಜ್ಞಾಪನಾ ಪತ್ರದ ಮೂಲಕ 3 ದಿನದೊಳಗಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ ಈ ತನಕ ಇದರ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಅವರು ತನಿಖೆಯಾಗದಿದ್ದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.