ಮಡಿಕೇರಿ, ಡಿ. ೨೧: ಪ್ರಸ್ತುತ ೨೦೨೨-೨೩ನೇ ಸಾಲಿನಲ್ಲಿ ಏಪ್ರಿಲ್ ೧ ರಿಂದ ಸೆಪ್ಟಂಬರ್ ೩೦, ೨೦೨೨ ರವರೆಗೆ ಚಾಲ್ತಿಯಲ್ಲಿದ್ದ ಸಹಾಯಧನದ ಯೋಜನೆಯನ್ನು ಮಾರ್ಚ್ ೨೦೨೩ ರವರೆಗೆ ವಿಸ್ತರಿಸಲಾಗಿದೆ.

ಆದ್ದರಿಂದ ಸಣ್ಣ ಕಾಫಿ ಬೆಳೆಗಾರರು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ (೧೦ ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ಕೈಗೊಳ್ಳುವ ಕಾಫಿ ಮರುನಾಟಿ, ಜಲಸಂವರ್ಧನ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದ್ದು, ಸಹಾಯಧನಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಾಮಾನ್ಯ ಬೆಳೆಗಾರರು ತಮ್ಮ ತೋಟಗಳಲ್ಲಿ ಕಾಫಿ ಮರುನಾಟಿ, ಹೊಸದಾಗಿ ಕೆರೆ - ತೆರೆದ ಬಾವಿ ನಿರ್ಮಿಸಲು ಹಾಗೂ ತುಂತುರು ನೀರಾವರಿ, ಹನಿ ನೀರಾವರಿ ಅಳವಡಿಸಿಕೊಳ್ಳಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಸಣ್ಣ ಕಾಫಿ ಬೆಳೆಗಾರರು, ಕಾಫಿ ಮರುನಾಟಿ ಮಾಡಲು, ಹೊಸದಾಗಿ ಕೆರೆ, ಪಲ್ಪರ್, ಕಾಫಿ ಕಣ, ಗೋದಾಮು ನಿರ್ಮಿಸಲು ಪ್ರಯೋಜನವನ್ನು ಪಡೆಯಬಹುದಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ ೧೫ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿ ಪ್ರಕಟಣೆ ತಿಳಿಸಿದೆ.