*ಸಿದ್ದಾಪುರ, ಡಿ.೨೧ : ವಾಲ್ನೂರು- ತ್ಯಾಗತ್ತೂರು ಗ್ರಾ.ಪಂಗೆ ಸೇರಿದ ಕಚೇರಿ ಕಟ್ಟಡಗಳಿರುವ ನಿವೇಶನದ ಬಗ್ಗೆ ಗೊಂದಲ ಮುಂದುವರೆದಿದೆ.

ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ನಿವೇಶನದ ದಾಖಲೆಗಳು ಇರುವ ಕಾರಣ ಸಂಬAಧಿಸಿದ ವ್ಯಕ್ತಿ ಕೃಷ್ಣಪ್ಪ ಎಂಬವರು ಇದು ತಮಗೆ ಸೇರಿದ ಜಾಗವೆಂದು ಬೇಲಿ ನಿರ್ಮಿಸಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾ.ಪಂ ಸಿದ್ದಾಪುರ ಪೊಲೀಸರಿಗೆ ದೂರು ನೀಡಿತ್ತು.

ಸಿಬ್ಬಂದಿಗಳ ಸಹಿತ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿಗಳು ತಕ್ಷಣ ಬೇಲಿ ತೆರವು ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಕೃಷ್ಣಪ್ಪ ಅವರ ಪುತ್ರ ಉದಯಕುಮಾರ್ ದಾಖಲೆಗಳು ನಮ್ಮ ಪರವಾಗಿದೆ. ಇದು ಗ್ರಾ.ಪಂ. ಜಾಗವೆಂದು ಸಾಬೀತು ಪಡಿಸಲು ದಾಖಲೆಗಳಿದ್ದಲ್ಲಿ ಬೇಲಿ ತೆಗೆಯುವುದಾಗಿ ತಿಳಿಸಿದರು.

ಬೇಲಿ ತೆರವುಗೊಳಿಸಲು ತಹಶೀಲ್ದಾರರು ಸೂಚಿಸಲಿ, ಪೊಲೀಸರು ತೆರವುಗೊಳಿಸುವಂತಿಲ್ಲ ಎಂದರು. ಎಷ್ಟೇ ಒತ್ತಡ ಹೇರಿದರೂ ಬೇಲಿ ತೆರವುಗೊಳಿಸದ ಕಾರಣ ಪೊಲೀಸರು ಮರಳಿದರು. ಗ್ರಾ.ಪಂ ಮುಂದಿನ ಕ್ರಮಕ್ಕೆ ಚಿಂತನೆ ನಡೆಸಿದೆ.